ಬೆಳಗಾವಿ: ಇತ್ತೀಚಿಗೆ ಉತ್ತರಪ್ರದೇಶದಲ್ಲಿ ನಡೆದ ಅತ್ಯಾಚಾರ ಖಂಡಿಸಿ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ, ಸರ್ಕಾರ ಈವರೆಗೂ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿ ನಗರದ ಅಂಬೇಡ್ಕರ್ ಗಾರ್ಡನ್ನಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಘಟಕದಿಂದ ಕೈಗೆ ಕಪ್ಪು ಬಟ್ಟೆ ಕಟ್ಟಿ ಮೌನ ಪ್ರತಿಭಟನೆ ನಡೆಸಲಾಯಿತು.
ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಇರುವಾಗ ಹೆಚ್ಚು ದಲಿತರ ಮೇಲೆಯೇ ಅತ್ಯಾಚಾರವಾಗುತ್ತಿದ್ದರೂ, ಅಲ್ಲಿನ ಸರ್ಕಾರ ಇದ್ದೂ ಇಲ್ಲದಂತಾಗಿದೆ. ಮಹಿಳೆಯರಿಗೆ ಉತ್ತರಪ್ರದೇಶದಲ್ಲಿ ಸ್ವಾತಂತ್ರ್ಯವೇ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ಬಂದಾಗಿನಿಂದ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗಿದೆ. ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ಮತ್ತು ತಮಿಳುನಾಡಿನಲ್ಲಿ ನಡೆದ ಅತ್ಯಾಚಾರ ಕೊಲೆಗಳಿಗೆ ಅಲ್ಲಿನ ಸರ್ಕಾರಗಳು ಶಿಕ್ಷೆ ವಿಧಿಸಿವೆ. ಆದ್ರೆ, ಉತ್ತರ ಪ್ರದೇಶದಲ್ಲಿ ಅವರದೇ ಆದ ಕಾನೂನು ರಚಿಸಿಕೊಂಡಂತೆ ಕಾಣುತ್ತಿದೆ. ಇಷ್ಟೆಲ್ಲ ನಡೆದರೂ ಪ್ರಧಾನ ಮಂತ್ರಿಗಳು ಒಂದು ಮಾತನ್ನೂ ಆಡುತ್ತಿಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅತ್ಯಾಚಾರಿಗಳಿಗೆ ಇನ್ನಾದರೂ ಕಠಿಣ ಶಿಕ್ಷೆ ನೀಡಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಜಯಶ್ರೀ ಮಾಳಗಿ, ಮಂಜುನಾಥ್ ಕಾಂಬಳೆ, ಮಲ್ಲೇಶ್ ಚೌಗಲೆ ಇದ್ದರು.