ಬೆಳಗಾವಿ : ಎಲ್ಲೂ ಸುದ್ದಿಯಾಗದೆ, ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಸದ್ದಿಲ್ಲದೇ ತಮ್ಮ ತತ್ವಗಳನ್ನು ಬಿಟ್ಟು ಎದ್ದು ಹೋದ ವಿಜಯಪುರ ಜ್ಞಾನಯೋಗಾಶ್ರಮದ ಸಂತ ಸಿದ್ದೇಶ್ವರ ಸ್ವಾಮೀಜಿ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸಿದ್ದೇಶ್ವರ ಸ್ವಾಮೀಜಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ಸಿದ್ದೇಶ್ವರ ಸ್ವಾಮೀಜಿ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಕೆಲ ದಿನಗಳಿಂದ ಸ್ವಾಮೀಜಿ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅವರನ್ನು ಉಳಿಸಿಕೊಳ್ಳಲು ವೈದ್ಯರು ಮಾಡಿದ ಪ್ರಯತ್ನ ಫಲಕಾರಿ ಆಗಿಲ್ಲ. ಸ್ವಾಮೀಜಿಯವರು ಮಾಡಿರೋ ಕಾರ್ಯಗಳು ಯಾವತ್ತಿಗೂ ಭೂಮಿಯ ಮೇಲೆ ಚಿರಕಾಲ ಇರುತ್ತವೆ ಎಂದರು.
ಸಿದ್ದೇಶ್ವರ ಸ್ವಾಮೀಜಿಯವರು ನಡೆ, ನುಡಿ, ವಿಚಾರ ಬೇರೆ ಆಗಿದ್ದು, ಸಮಾಜದಲ್ಲಿ ಪರಿವರ್ತನೆ ಮಾಡಲು ಸಾಕಷ್ಟು ಪ್ರಯತ್ನ ಮಾಡಿ ಜೊತೆಗೆ ಸಾಕಷ್ಟು ಅಭಿಮಾನಿಗಳನ್ನು ಹುಟ್ಟು ಹಾಕಿದ್ದಾರೆ. ಸ್ವಾಮೀಜಿ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಆದರ್ಶಗಳು ಹಾಗೇ ಉಳಿಯಲಿ. ಹೊಸ ಪೀಳಿಗೆಗೆ ಅವರ ಆದರ್ಶಗಳು ನಾಂದಿ ಆಗಲಿ ಎಂದು ಆಶಯ ವ್ಯಕ್ತಪಡಿಸಿದರು.
ನಾನು ಇಂದು ದರ್ಶನ ಪಡೆಯುವುದಕ್ಕೆ ವಿಜಯಪುರಕ್ಕೆ ಹೋಗುತ್ತಿಲ್ಲ, ಮತ್ತೊಂದು ಬಾರಿ ಅವಕಾಶ ಸಿಕ್ಕಾಗ ಆಶ್ರಮಕ್ಕೆ ಭೇಟಿ ನೀಡುತ್ತೇನೆ ಎಂದು ಸತೀಶ್ ಜಾರಕಿಹೊಳಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಇದನ್ನೂ ಓದಿ : ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಜನಸಾಗರ, ಸಂಜೆ ಅಂತ್ಯಕ್ರಿಯೆ; ವಿಜಯಪುರದ ಶಾಲೆ, ಕಾಲೇಜುಗಳಿಗೆ ರಜೆ