ಬೆಂಗಳೂರು/ಬೆಳಗಾವಿ: ಅಧಿವೇಶನದ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರ ದೆಹಲಿ ಭೇಟಿ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಇನ್ನು ಐದಾರು ದಿನಗಳಲ್ಲಿ ಆಕಾಶ ಏನಾದ್ರೂ ಕಳಚಿ ಬೀಳುತ್ತಾ? ಎಂದು ಕಿಡಿ ಕಾರಿದರು.
ವಿಧಾನಸಭೆಯಲ್ಲಿ ಎಸ್ಟಿ ಎಸ್ಸಿ ಮೀಸಲಾತಿ ವಿಚಾರವಾಗಿ ನಿಯಮ 69 ಅಡಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸದನದಲ್ಲಿ ಸಿಎಂ ಬೊಮ್ಮಾಯಿ ಗೈರಿಗೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಇಂತಹ ವಿಚಾರ ಪ್ರಸ್ತಾಪ ಮಾಡುವಾಗ ಸಿಎಂ ಇರಬೇಕಿತ್ತು. ಅಸೆಂಬ್ಲಿ ನಡೆಯುವಾಗ ದೆಹಲಿಗೆ ಯಾರಾದರೂ ಹೋಗ್ತಾರಾ?. ಅನುಮತಿ ಪಡೆದು ಹೋಗಲಿ, ಆದರೆ, ಅವರು ಅಸೆಂಬ್ಲಿ ನಡೆಯುವಾಗ ಇರಬೇಕು. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗಬೇಕು. ಸಿಎಂ ಇಲ್ಲ ಎಂದರೆ ಹೆಂಗೆ, ನೀವು ಅನುಮತಿ ಕೊಡಬಾರದು ಎಂದರು.
ಇನ್ನು ಐದಾರು ದಿನಗಳಲ್ಲಿ, ಆಕಾಶ ಕಳಚಿ ಬೀಳುತ್ತಾ? ಅಸೆಂಬ್ಲಿ ನಡೆಯವಾಗ ಹೋಗಬಾರದು. ನಾನು ಸಿಎಂ ಆಗಿದ್ದಾಗ ಯಾವತ್ತು ವಿಧಾನಸೌಧ ಬಿಟ್ಟು ಹೋಗಿಲ್ಲ. ಎಷ್ಟೇ ಕೆಲಸ ಇದ್ರೂ ಅಸೆಂಬ್ಲಿ ಆದ ನಂತರ ಇಟ್ಕೊಳ್ಳಿ ಅಂತಿದ್ದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯೆ ಕೊಟ್ಟ ಸ್ಪೀಕರ್ ಕಾಗೇರಿ, ಸಿಎಂ ನನ್ನ ಜೊತೆ ಮಾತನಾಡಿದ್ದಾರೆ. ಅನುಮತಿ ಕೊಟ್ಟಿದ್ದೇನೆ. ಕಾನೂನು ಸಚಿವ ಮಾಧುಸ್ವಾಮಿ ಇದ್ದಾರೆ, ಚರ್ಚೆ ಮುಂದುವರಿಸಿ ಎಂದು ಸೂಚಿಸಿದರು. ಆಗ ಮಾಧುಸ್ವಾಮಿ ಬರದೇ ಇದ್ರೆ ಒಳ್ಳೆಯದು ಎಂದ ಸಿದ್ದರಾಮಯ್ಯ ಕಾಲೆಳೆದರು.
ಆಗ ಸ್ಪೀಕರ್ ಕಾಗೇರಿ ಅವರು ಏನಿದು ಮಾಧುಸ್ವಾಮಿ ಅವರೇ, ನೋಡಿ ನೀವು ಬಂದಿದ್ದೀರಿ ಎಂದು ಹೇಳಿದರೆ, ನೀವು ಬರದೇ ಇದ್ರೆ ಒಳ್ಳೆಯದು ಎಂದು ಹೇಳ್ತಾರೆ ಎಂದು ತಮಾಷೆ ಮಾಡಿದರು. ಇದಕ್ಕೆ ಸಿದ್ದರಾಮಯ್ಯ ನಗುನಗುತ್ತಾ, ಕಮ್ ಅಂಡ್ ಸಿಟ್, ನೀವು ಇದ್ರೆ ನಮಗೆ ಸ್ಫೂರ್ತಿ. ನೀವು ಇಲ್ಲದೇ ಇದ್ರೆ ಸರ್ಕಾರವೇ ಇಲ್ಲ ಎಂದರು.
ದೆಹಲಿಗೆ ಸಿಎಂ ಬೊಮ್ಮಾಯಿ: ಸಚಿವ ಸಂಪುಟ ವಿಸ್ತರಣೆ, ಜನಾರ್ದನ ರೆಡ್ಡಿ ಹೊಸ ಸ್ಥಾಪನೆ ಹಿನ್ನೆಲೆಯಲ್ಲಿ ಇಂದು ಸಿಎಂ ಬೊಮ್ಮಾಯಿ ಅವರು ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿಲಿದ್ದು, ಮಧ್ಯಾಹ್ನದ ಕಲಾಪಕ್ಕೆ ಗೈರಾದರು. ಅಧಿವೇಶನದ ಮಧ್ಯೆ ಸಿಎಂ ದೆಹಲಿ ಪ್ರವಾಸದ ಬಗ್ಗೆ ಸಿದ್ದರಾಮಯ್ಯ ಗರಂ ಆದರು.
ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ ಮಾಡಿರುವ ಕುರಿತು ಪಕ್ಷದ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸುತ್ತೇನೆ. ಈ ಬಗ್ಗೆ ಹೈಕಮಾಂಡ್ ಗಮನಕ್ಕೂ ತರುತ್ತೇನೆ ಎಂದು ದೆಹಲಿ ಭೇಟಿಯ ಬಗ್ಗೆ ಸಿಎಂ ಬೊಮ್ಮಾಯಿ ಈ ಮೊದಲು ತಿಳಿಸಿದ್ದರು.
12 ವರ್ಷಗಳ ನಂತರ ರಾಜಕೀಯ ಕ್ಷೇತ್ರಕ್ಕೆ ಮರು ಪ್ರವೇಶ ಮಾಡುವ ಸೂಚನೆ ನೀಡಿದ್ದ ಜನಾರ್ದನ ರೆಡ್ಡಿ ಭಾನುವಾರ ಮಾಧ್ಯಮಗೋಷ್ಠಿ ನಡೆಸಿ ತಮ್ಮ ಹೊಸ ರಾಜಕೀಯ ಪಕ್ಷ ಘೋಷಿಸಿದರು. 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ'ದ ಮೂಲಕ ಮುಂದಿನ ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಯುವುದಾಗಿ ಪ್ರಕಟಿಸಿದ್ದಾರೆ. ಇದು ಕೆಲ ಕ್ಷೇತ್ರಗಳಲ್ಲಿ ಬಿಜೆಪಿಗರಿಗೆ ಮುಳುವಾಗಲಿದೆ ಎನ್ನಲಾಗುತ್ತಿದೆ.
(ಇದನ್ನೂ ಓದಿ: ಜನಾರ್ದನ್ ರೆಡ್ಡಿ ಹೊಸ ಪಕ್ಷ ಘೋಷಣೆ: ಮತಗಳ ವಿಭಜನೆ ಭಯ.. ಹೈಕಮಾಂಡ್ ಜೊತೆ ಇಂದು ಸಿಎಂ ಚರ್ಚೆ)
(ಇದನ್ನೂ ಓದಿ: ವ್ಯಾಪಾರ ವ್ಯವಹಾರ ಬಿಟ್ಟು ಬಿಜೆಪಿ ಕಟ್ಟಿದ್ದಕ್ಕೆ ಬೆಲೆ ಸಿಗಲಿಲ್ಲ: ಗಾಲಿ ಜನಾರ್ದನ ರೆಡ್ಡಿ )