ಚಿಕ್ಕೋಡಿ: ದೆಹಲಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿಯಾಗಿ ನನ್ನ ಇಲಾಖೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದೇನೆ ಎಂದು ರಾಜ್ಯ ಜವಳಿ ಮತ್ತು ಅಲ್ಪ ಸಂಖ್ಯಾತ ಖಾತೆ ಸಚಿವ ಶ್ರೀಮಂತ ಪಾಟೀಲ್ ಹೇಳಿದರು.
ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ರಾಜ್ಯ ಜವಳಿ ಖಾತೆಯಲ್ಲಿನ ಕೆಲ ಸಮಸ್ಯೆಗಳ ಪರಿಹಾರದ ಬಗ್ಗೆ ಕೇಂದ್ರ ಜವಳಿ ಖಾತೆ ಸಚಿವರೊಂದಿಗೆ ಚರ್ಚೆ ಮಾಡಿದ್ದೇನೆ. ಕೇಂದ್ರ ಸಚಿವರು ಸಹಾಯದ ಭರವಸೆ ನೀಡಿದ್ದಾರೆ. ಹೊಸ ಜವಳಿ ನೀತಿಯ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಹೊಸ ನೀತಿ ಬಗ್ಗೆ ಒಂದು ನಕಲು ಪ್ರತಿಯನ್ನೂ ನೀಡಿದ್ದೇವೆ. ಅದನ್ನು ನೋಡಿದ ಸಚಿವರು, ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಐಟಿಐ ಹಾಗೂ ಡಿಪ್ಲೋಮಾ ಕಾಲೇಜು ಸ್ಥಾಪಿಸುವುದು ಮತ್ತು ಅಲ್ಪಸಂಖ್ಯಾತ ಶಾಲೆಗಳಲ್ಲಿ ಡಿಜಿಟಲ್ ತರಗತಿ ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಈ ಬಗ್ಗೆಯೂ ಚರ್ಚಿಸಲು ನಿರ್ಧರಿಸಿದ್ದೆ. ಆದರೆ, ಕೇಂದ್ರ ಅಲ್ಪ ಸಂಖ್ಯಾತ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಅವರು ಅಧಿವೇಶನದಲ್ಲಿ ಪಾಲ್ಗೊಂಡಿದ್ದರಿಂದ, ಫೋನ್ ಮಾಡಿ ಮಾತನಾಡಿದ್ದೇನೆ. ಅಧಿವೇಶನ ಮುಗಿದ ಬಳಿಕ ದೆಹಲಿಗೆ ಬನ್ನಿ, ಚರ್ಚೆ ಮಾಡೋಣ ಎಂದಿದ್ದಾರೆ ಎಂದು ಹೇಳಿದರು. ಈಗಾಗಲೇ ಅವರ ಕಚೇರಿಯ ಅಧಿಕಾರಿಗಳಿಗೆ ನಮ್ಮ ಪ್ರಪೋಸಲ್ ನೀಡಿ ಬಂದಿದ್ದೇವೆ ಎಂದು ಸಚಿವ ಶ್ರೀಮಂತ್ ಪಾಟೀಲ್ ಮಾಹಿತಿ ನೀಡಿದರು.
ಕೋವಿಡ್‌ನಿಂದಾಗಿ ನೇಕಾರರ ಸೀರೆಗಳು ಮಾರಾಟವಾಗುತ್ತಿಲ್ಲ. ಹೀಗಾಗಿ, ಆನ್ಲೈನ್ ಮೂಲಕ ಸೀರೆ ಮಾರಾಟ ಪ್ರಕ್ರಿಯೆ ಪ್ರಾರಂಭಿಸುವ ಕುರಿತು ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ್ದೇವೆ. ಸೀರೆಗಳ ಪ್ರದರ್ಶನದ ಜೊತೆಗೆ ಮಾರಾಟ ಮಾಡಲು ಒಪ್ಪಿಗೆ ನೀಡುವ ಭರವಸೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು.