ಅಥಣಿ: ಅಥಣಿ ಮತ್ತು ಕಾಗೋಡ ಟಿಕೆಟ್ ಹಂಚಿಕೆ ಸಂಬಂಧ ಇಂದು ಕಾಂಗ್ರೆಸ್ ಕಾರ್ಯಕರ್ತರ ಜೊತೆ ಮಾಜಿ ಸಚಿವ, ಶಾಸಕ ಸತೀಶ್ ಜಾರಕಿಹೊಳಿ ಸಭೆ ನಡೆಸಿದರು.
ಸಭೆಯಲ್ಲಿ ಅಥಣಿ ಸ್ಥಳೀಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸ್ಥಳೀಯರಿಗೆ ಬಿಟ್ಟು ನೀವು ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡಬೇಡಿ. ಸದಾಶಿವ ಬುಟಾಳೆ ಟಿಕೆಟ್ ನೀಡಿ ಎಂದು ಪಟ್ಟುಹಿಡಿದರು. ಈ ವೇಳೆ ಸತೀಶ್ರವರು ಇನ್ನೆರಡು ದಿನಗಳಲ್ಲಿ ಅಥಣಿ ಟಿಕೆಟ್ ಘೋಷಣೆಯಾಗಲಿದೆ ಎಂದು ಕಾರ್ಯಕರ್ತರಿಗೆ ತಿಳಿಸಿದರು. ಇದೇ ವೇಳೆ ಮಹೇಶ್ ಕುಮಟಳ್ಳಿ ಸೋಲಿಸಲು ಕರೆ ನೀಡಿದರು.
ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಪಕ್ಷ ತೊರೆದು ಕುಮಟಳ್ಳಿ ಹೋಗಿದ್ದಾರೆ. ಮತದಾರರು ಹೋಗಿಲ್ಲ. ಈ ಬಾರಿ ಗೆಲುವು ಸಾಧಿಸುತ್ತೇವೆ. ಲಕ್ಷ್ಮಣ ಸವದಿ ವಿರುದ್ಧ ಸ್ಪರ್ಧಿಸಿ ಮಹೇಶ್ ಕುಮಟಳ್ಳಿ ಅವರನ್ನು ಗೆಲ್ಲಿಸಿದ್ದೇವು. ಈ ಬಾರಿಯು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಟಿಕೆಟ್ ವಿಷಯವಾಗಿ ಸಿದ್ದರಾಮಯ್ಯ ಅಥಣಿ ಸ್ಥಳೀಯ ಎಲ್ಲಾ 12 ಆಕಾಂಕ್ಷಿಗಳನ್ನು ಪ್ರತ್ಯೇಕವಾಗಿ ಮಾತನಾಡಿಸಿದ್ದಾರೆ. ನಮ್ಮಲ್ಲಿ ಗೊಂದಲವಿಲ್ಲ ಎಂದರು.
ಅಥಣಿ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ಸಿಗರು ಬೆಂಬಲ ನೀಡುವುದಿಲ್ಲ ಎನ್ನುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಆ ರೀತಿ ಏನು ಇಲ್ಲ. ಮೂಲ ಹಾಗೂ ಸ್ಥಳೀಯ ಕಾಂಗ್ರೆಸ್ಸಿಗರು ಎಂಬ ಪ್ರಶ್ನೆ ಇಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದರು.
ರಮೆಶ್ ಜಾರಕಿಹೋಳಿ ಯಾವ ವಸ್ತು ಕಳೆದುಕೊಂಡಿದ್ದಾರೆ ಎನ್ನುವ ಪ್ರಶ್ನೆಗೆ ಸಮಯ ಬಂದಾಗ ಹೇಳುತ್ತೇವೆ ಎಂದರು.
ಕಾರ್ಯಕ್ರಮಕ್ಕೆ ಶಾಸಕ ಶಹಜಹಾನ್ ಡೊಂಗರ್ ಗಾಂವ್ ಹಾಗೂ ಪ್ರಮುಖ ನಾಯಕರು ಗೈರಾಗಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸಿ, ಅವರು ಬೇರೆ, ಬೇರೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಇನ್ನೂ ಸಮಯವಿದೆ ಎಂದು ತಿಳಿಸಿದರು.
ಈ ವೇಳೆ ಕಾರ್ಯಕರ್ತರು ನಿಷ್ಠಾವಂತ, ಎಲ್ಲರಿಗೂ ತಿಳಿದಿರುವಂತ, ಅಭಿವೃದ್ಧಿ ಕೆಲಸಗಳಿಗೆ ಒತ್ತು ಕೊಡುವಂತಹ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿಕೊಂಡರು.