ಬೆಳಗಾವಿ: ರಮೇಶ್ ಜಾರಕಿಹೊಳಿಗೆ ಯಾವುದೇ ಪದವಿ ಬೇಡವಾಗಿದ್ದು, ಕೇವಲ ಸರ್ಕಾರ ಬೀಳಿಸುವುದಷ್ಟೇ ಅವನ ತಲೆಯಲ್ಲಿದೆ ಎಂದು ಸಹೋದರನ ವಿರುದ್ಧ ಸತೀಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಪಕ್ಷದ ಸಭೆಗಳಲ್ಲಿ ನಾನು ಪದೇ ಪದೆ ಹೇಳಿದ್ದೇನೆ. ರಮೇಶ್ ಪಕ್ಷಕ್ಕೆ ವಾಪಸ್ ಬರುವುದಿಲ್ಲ. ಅವನಿಗೆ ಮುಖ್ಯಮಂತ್ರಿ ಹಾಗೂ ಪ್ರಧಾನಿ ಹುದ್ದೆ ಕೊಟ್ಟರು ಸರ್ಕಾರ ಕೆಡುವುವ ಕೆಲಸ ಮಾತ್ರ ಬಿಡುವುದಿಲ್ಲ. ಸದ್ಯಕ್ಕೆ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾವುದೇ ತೊಂದರೆ ಇಲ್ಲ. ರಾಜೀನಾಮೆ ನೀಡಿದ ನಮ್ಮ ಪಕ್ಷದ ಶಾಸಕರು ವಾಪಸ್ ಬರುತ್ತಾರೆ ಎಂದರು.
ಬಿಜೆಪಿ ಕೈವಾಡ:
ಸಮ್ಮಿಶ್ರ ಸರ್ಕಾರದ ಅಸ್ಥಿರತೆಗೆ ಬಿಜೆಪಿ ಹಿಂದಿನಿಂದ ಕೆಲಸ ಮಾಡುತ್ತಿದೆ. ಶಾಸಕರ ರಾಜೀನಾಮೆ ಕೊಡಿಸಿ ಲಕ್ಷಾಂತರ ಹಣ ಖರ್ಚು ಮಾಡಿ ಮುಂಬೈಗೆ ಕಳುಹಿಸಲಾಗಿದೆ. ಬಿಜೆಪಿ ಹಣದಿಂದ ಸರ್ಕಾರ ಕೆಡುವಲು ಹೊರಟಿದೆ ಎಂದು ಆರೋಪಿಸಿದರು.
ಬೆಳಗಾವಿ ಕಾರಣ:
ರಾಜ್ಯ ರಾಜಕಾರಣದಲ್ಲಿ ಈ ರೀತಿ ಬದಲಾವಣೆಯಾಗಲು ಬೆಳಗಾವಿ ಮೂಲ ಕಾರಣ. ಇಲ್ಲಿಂದಲೇ ಅನೇಕ ಬೆಳವಣಿಗೆಗಳು ನಡೆದವು ಎಂದು ಹೇಳುವ ಮೂಲಕ, ರಮೇಶ್ ಹಾಗೂ ಡಿಕೆಶಿ ನಡುವಿನ ಮುಸುಕಿನ ಗುದ್ದಾಟ ಪರಿಣಾಮವಾಗಿ ಇವೆಲ್ಲ ಬೆಳವಣಿಗೆ ನಡೆದಿವೆ ಎಂಬಂತೆ ಪರೋಕ್ಷವಾಗಿ ನುಡಿದರು.
ನಮ್ಮ ಶಾಸಕರನ್ನು ಕರೆತರಲಾಗುತ್ತದೆ. ರಾಜೀನಾಮೆ ನೀಡಿದವರೆಲ್ಲರು ತಮ್ಮ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟಿದ್ದಾರೆ. ಅವರ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಮನವೊಲಿಸುವ ಕೆಲಸ ಮಾಡಲಾಗುವುದು ಎಂದರು.