ಬೆಳಗಾವಿ: ಹಿಜಾಬ್ ಪರವಾಗಿ ನಮ್ಮ ನಾಯಕರು ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಹಿಜಾಬ್ ಪರವಾಗಿ ಕಾಂಗ್ರೆಸ್ ಪಕ್ಷ, ವಸ್ತ್ರ ಧರಿಸುವುದು ಅವರವರ ಇಚ್ಚೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪಕ್ಷದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೂ ಯಾವ ಉಡುಪು ಹಾಕಿಕೊಳ್ಳಬೇಕು. ಯಾವ ಬಣ್ಣದ ಉಡುಪು ಹಾಕಬೇಕು ಅವರಿಗೆ ಬಿಟ್ಟ ವಿಚಾರವಾಗಿದೆ. ನೀವು ಇಂತಹದ್ದೇ ಹಾಕಿಕೊಳ್ಳಿ ಅಂತಾ ಹೇಳುವ ಅಧಿಕಾರ ಯಾರಿಗೂ ಇಲ್ಲ. ಅವರದು ಅವರು ಹಾಕಿಕೊಳ್ಳುತ್ತಾರೆ. ನಿಮ್ಮದು ನೀವು ಹಾಕಿಕೊಳ್ಳಿ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಹಿಜಾಬ್ ಬಗ್ಗೆ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು. ಆಡಳಿತ ಮಂಡಳಿಯವರು ಮುಂದಾಗಬೇಕು. ಶಿಕ್ಷಣದ ಸಮಯದಲ್ಲಿ ಧರ್ಮ, ಜಾತಿ ಜೊತೆಗೆ ಹೋದರೆ ಬದುಕು ಹಾಳಾಗುತ್ತದೆ. ಸರ್ಕಾರ ಈ ವಿಚಾರವನ್ನು ಬೇಗ ಮುಗಿಸಿದರೆ ಒಳ್ಳೆಯದಾಗುತ್ತೆ. ಇಲ್ಲವಾದರೆ ಸುಮಾರು ವರ್ಷಗಳ ಸಮಸ್ಯೆಯಾಗುತ್ತದೆ. ವಸ್ತುಸ್ಥಿತಿ ಅರಿವಾದಾಗ ವಿದ್ಯಾರ್ಥಿಗಳು ಬದಲಾಗುತ್ತಾರೆ. ಸ್ವಲ್ಪ ಸಮಯ ಬೇಕು, ಅವರಿಗೂ ಸರಿತಪ್ಪುಗಳ ಅರಿವಾಗುತ್ತದೆ ಎಂದರು.
ಈಶ್ವರಪ್ಪ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಂದು ಧ್ವಜ ಬದಲಾವಣೆ ಎಂದವರು ನಾಳೆ ದೇಶದ ಹೆಸರು ಬದಲಾಯಿಸಿ ಎನ್ನುವುದಿಲ್ಲ ಎಂದು ಹೇಗೆ ಹೇಳುತ್ತೀರಿ ಅದಕ್ಕಾಗಿ ಈಶ್ವರಪ್ಪರನ್ನ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಆದರೆ ಅವರನ್ನು ಸರ್ಕಾರ ಬಚಾವ್ ಮಾಡಲು ಹೊರಟಿದೆ. ಸರ್ಕಾರ ಉತ್ತರ ಹೇಳೋಕೆ ರೆಡಿ ಇಲ್ಲ. ಸೋಮವಾರವರೆಗೆ ಕಾದು ನೋಡುತ್ತೇವೆ ಎಂದರು.