ಗೋಕಾಕ್, ಬೆಳಗಾವಿ: ಅಧಿಕಾರ ಇದ್ದರೂ, ಇರದಿದ್ದರೂ ನಾವು ಮೊದಲಿನಿಂದಲೂ ಜಿಲ್ಲಾದ್ಯಂತ ಸಂಚರಿಸಿ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಮುಂದೆ ಕೂಡ ಜನರ ಸೇವೆಯಲ್ಲೇ ನಿರತರಾಗಲಿದ್ದೇವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿದರು.
ಅರಬಾವಿ ಮತಕ್ಷೇತ್ರ ವ್ಯಾಪ್ತಿಯ ಅರಬಾವಿ, ಲೋಳಸೂರ, ಸಂಗನಕೇರಿ, ಕಲ್ಲೋಳಿ ಗ್ರಾಮಗಳಲ್ಲಿ ಲೋಕಸಭಾ ಉಪಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 4 ಬಾರಿ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೀರಿ, ಈ ಬಾರಿ ನಮಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಮೊದಲು ಹಿಡಕಲ್ ಡ್ಯಾಂ ಪೂರ್ತಿಯಾಗಿ ತುಂಬಿದಾಗ ಮಾತ್ರ ಕಾಲುವೆಗೆ ನೀರು ಹರಿಸುತ್ತಿದ್ದರು. ಆದರೆ, ನಾವು ಶಾಸಕರಾದ ನಂತರ ಈ ಬಗ್ಗೆ ಸರ್ಕಾರದೊಂದಿಗೆ ವಾದ ಮಾಡಿ, ಮಳೆಗಾಲ ಆರಂಭವಾಗುತ್ತಲೇ ಕಾಲುವೆಗೆ ನೀರು ಬಿಡಿಸುವ ವ್ಯವಸ್ಥೆ ಮಾಡಿದ್ದೆವು. ಇದರಿಂದ ರೈತರಿಗೆ ಬೆಳೆ ಬೆಳೆಯಲು ಅನುಕೂಲವಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮಾಸ್ಕ್ ಹಾಕಿಲ್ಲ ಎಂದು ವ್ಯಕ್ತಿಗೆ ರಸ್ತೆಯಲ್ಲೇ ಥಳಿಸಿದ ಪೊಲೀಸರು.. ವಿಡಿಯೋ ವೈರಲ್!
ದೂಪದಾಳ ಬ್ಯಾರೇಜ್ನಿಂದ ವ್ಯರ್ಥವಾಗಿ ಹೋಗುತ್ತಿದ್ದ ನೀರನ್ನು ಕೂಡ, ಬೇರೆಡೆ ತಿರುಗಿಸಿ ಸದ್ಬಳಕೆ ಮಾಡಿಕೊಳ್ಳಲಾಗಿದೆ. ಹಿಡಕಲ್ ಡ್ಯಾಂ ನೀರಿನಿಂದ ಮೂಡಲಗಿ, ರಾಯಬಾಗ, ಮುಧೋಳ, ಜಮಖಂಡಿ ತಾಲೂಕಿನ ಒಂದು ಲಕ್ಷ ಎಕರೆ ಭೂಪ್ರದೇಶಕ್ಕೆ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದರು.
ನಾನು ಸಣ್ಣ ಕೈಗಾರಿಕಾ ಸಚಿವನಾಗಿದ್ದ ಅವಧಿಯಲ್ಲಿ ಅರಬಾವಿಯಲ್ಲಿ ಜಿಟಿಟಿಸಿ ಕೇಂದ್ರ (ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ) ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆ ಕಾಲೇಜು ಇತ್ತೀಚೆಗೆ ಆರಂಭವಾಗಿದೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳು ಕೈಗಾರಿಕೆಗಳಿಗೆ ಪೂರಕವಾದ ಶಿಕ್ಷಣ ಪಡೆದು, ಉದ್ಯೋಗಕ್ಕೆ ಸೇರಲು ಅನುಕೂಲವಾಗಲಿದೆ ತಮ್ಮ ಸಾಧನೆಯನ್ನು ನೆನಪಿಸಿಕೊಂಡರು
ಇದೇ ವೇಳೆ, ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಸತೀಶ್ ಜಾರಕಿಹೊಳಿ ಅವರು ಅನುಭವಿ ರಾಜಕಾರಣಿಯಾಗಿದ್ದಾರೆ. ಸಂಸತ್ ಸದಸ್ಯರಿಗೆ ಇರಬೇಕಾದ ಎಲ್ಲ ಅರ್ಹತೆಗಳು ಅವರಲ್ಲಿವೆ. ಲೋಕಸಭೆಗೆ ಸಮರ್ಥ ಅಭ್ಯರ್ಥಿಯಾಗಿರುವ ಸತೀಶ್ ಅವರಿಗೆ ಬೆಳಗಾವಿ ಜನರು ಮತದಾನ ಮಾಡಿ, ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಬೈಕ್ ರ‍್ಯಾಲಿ-ರೋಡ್ ಶೋ
ಸಂಗನಕೇರಿ ಹಾಗೂ ಲೋಳಸೂರಿನಲ್ಲಿ ನೂರಾರು ಕಾರ್ಯಕರ್ತರು ಬೈಕ್ ರ‍್ಯಾಲಿ ಮೂಲಕ ಸತೀಶ್ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು. ಸತೀಶ್ ಜಾರಕಿಹೊಳಿ ಮತ್ತು ಶಾಸಕ ಪುಟ್ಟರಂಗಶೆಟ್ಟಿ ಅವರು ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದರು.