ಬೆಳಗಾವಿ: ಅಧ್ಯಕ್ಷೆ ಆಕಾಂಕ್ಷಿತ ಮಹಿಳೆಯನ್ನು ಎಳೆದಾಡಿದ ಬಿಜೆಪಿ ಶಾಸಕ ಸಿದ್ದು ಸವದಿ ಸೇರಿದಂತೆ ಇತರರು ಅಸಭ್ಯ ವರ್ತನೆ ತೋರಿರುವುದು ಕೆಟ್ಟ ಸಂಪ್ರದಾಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಗೋಕಾಕ ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯ ಮಹಾಲಿಂಗಪುರ ಪುರಸಭೆಗೆ ಸಂಬಂಧಿಸಿದಂತೆ ನಡೆದ ಘಟನೆಯು ಒಂದು ಕೆಟ್ಟ ಸಂಪ್ರದಾಯವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಹಿಳೆಯರ ಜೊತೆಗೆ ಅಸಭ್ಯವಾಗಿ ನಡೆದುಕೊಳ್ಳುವುದನ್ನು ನಾವು ಖಂಡಿಸುತ್ತೇವೆ. ಈ ಸಂಬಂಧ ನಮ್ಮ ಪಕ್ಷ ಪ್ರತಿಭಟನೆ ನಡೆಸಲಿದೆ ಎಂದರು.
ಘಟನೆಗೆ ಸಂಬಂಧಿಸಿದಂತೆ ಅಸಭ್ಯವಾಗಿ ನಡೆದುಕೊಂಡ ಎಲ್ಲರ ಮೇಲೆಯೂ ಪೊಲೀಸರು ಹಾಗೂ ಸರಕಾರ ಈ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.