ಬೆಳಗಾವಿ: ಜಾರಕಿಹೊಳಿ ಕುಟುಂಬದ 2ನೇ ತಲೆಮಾರಿನ ಮತ್ತಿಬ್ಬರು ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಪ್ರವೇಶ ಪಡೆದಿದ್ದಾರೆ. ಜಾರಕಿಹೊಳಿ ಕುಟುಂಬದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ ಕೆಎಂಎಫ್ ಮೂಲಕ ಈಗಾಗಲೇ ರಾಜಕೀಯ ಪ್ರವೇಶಿಸಿದ್ದಾರೆ. ಇದೀಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಹಾಗೂ ಪುತ್ರ ರಾಹುಲ್ ಅಧಿಕೃತವಾಗಿ ರಾಜಕೀಯ ರಂಗ ಪ್ರವೇಶಿಸಿದ್ದಾರೆ.
ಮೂರು ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಪಡೆದಿದ್ದ ಇಬ್ಬರೂ ಇದೀಗ ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿನ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಯೂಥ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ ರಾಹುಲ್ ಜಾರಕಿಹೊಳಿ, ಇತರ ಸದಸ್ಯರಿಗೆ ಸತೀಶ್ ಶುಗರ್ಸ್ ಲಿ. ವತಿಯಿಂದ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ರಾಹುಲ್ ಜಾರಕಿಹೊಳಿ ಅವರನ್ನು ಪರಿಚಯಿಸಿ, ಇಂದಿನಿಂದ ಅವರು ಜಿಲ್ಲೆಯಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಘೋಷಿಸಿದರು.
ಸತೀಶ್ ಜಾರಕಿಹೊಳಿ ಕಿವಿಮಾತು..
ರಾಜಕೀಯದಲ್ಲಿ ತೊಡಗಿಸಿಕೊಳ್ಳುವವರು ಮೊದಲು ಸಮಾಜ, ಸಮಾಜಸೇವೆ ಹಾಗೂ ಪಕ್ಷ ಎಂದರೇನು ಎಂಬುದನ್ನು ತಿಳಿದುಕೊಳ್ಳಬೇಕು. ಇದನ್ನು ಅರಿತಾಗ ಮಾತ್ರ ಅವರು ಯಶಸ್ವಿಯಾಗಲು ಸಾಧ್ಯ. ರಾಹುಲ್ ಹಾಗೂ ಪ್ರಿಯಾಂಕಾ ಜಾರಕಿಹೊಳಿ ಅವರು ಇಂದು ಅಧಿಕೃತವಾಗಿ ಜಿಲ್ಲಾ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಪಕ್ಷ ಸಂಘಟನೆಯ ಮೂಲಕ ಅವರು ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕು ಎಂದು ಕಿವಿಮಾತು ಹೇಳಿದರು.
ರಾಹುಲ್ ಮತ್ತು ಪ್ರಿಯಾಂಕಾ ಇಬ್ಬರು ತಮಗೆ ಅವಕಾಶವಿರುವಲ್ಲಿ ಹಾಗೂ ಎಲ್ಲಿ ಜನ ತಮ್ಮ ಸೇವೆ ಬಯಸುತ್ತಾರೋ ಅಲ್ಲೆಲ್ಲಾ ಹೋಗಿ ಸೇವೆ ಮಾಡಬೇಕು. ಜೊತೆಗೆ ಪಕ್ಷವನ್ನು ಬಲಪಡಿಸಬೇಕು. ಹಿರಿಯರು, ಕಿರಿಯರೊಂದಿಗೆ ಬೆರೆತು ಅವರು ಕೊಡುವ ಸಲಹೆ, ಸೂಚನೆಗಳನ್ನು ಪಾಲಿಸಬೇಕು. ತಮ್ಮ ವಿಚಾರಗಳನ್ನು ಅವರಿಗೆ ತಿಳಿಸಬೇಕು. ಪಕ್ಷ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.