ಗೋಕಾಕ್ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಯಮಕನಮರಡಿ ಮತಕ್ಷೇತ್ರ ಹಾಗೂ ಬೆಳಗಾವಿ ತಾಲೂಕಿನ ಕೊರೊನಾ ವಾರಿಯರ್ಸ್ಗಳಿಗೆ ಇಂದು ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಸ್ಯಾನಿಟೈಸರ್, ಮಾಸ್ಕ್ ಹಾಗೂ ಪಿಪಿಇ ಕಿಟ್ ಗಳನ್ನು ವಿತರಿಸಿದರು.
ಬಳಿಕ ಮಾತನಾಡಿದ ಜಾರಕಿಹೊಳಿ, "ಕೊರೊನಾ ಮುಂಚೂಣಿ ಕಾರ್ಯಕರ್ತರಾದ ಪೊಲೀಸರು, ಆಶಾ ಕಾರ್ಯಕರ್ತೆಯರು ಹಾಗೂ ಇನ್ನಿತರರಿಗೆ ಸ್ಯಾನಿಟೈಸರ್, ಮಾಸ್ಕ್‌ಗಳನ್ನು ವಿತರಿಸಲಾಗುತ್ತಿದೆ.
ಕೊರೊನಾ ಸೋಂಕಿತರ ಶವಸಂಸ್ಕಾರ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರಿಗೆ ಪಿಪಿಇ ಕಿಟ್ಗಳನ್ನು ವಿತರಿಸಲಾಗುತ್ತಿದೆ.
ಕೋವಿಡ್ ನಿಯಂತ್ರಣಕ್ಕಾಗಿ ಕೊರೊನಾ ವಾರಿಯರ್ಸ್‌ಗಳೊಂದಿಗೆ ಸತೀಶ್ ಶುಗರ್ಸ್ ಹಾಗೂ ಸತೀಶ್ ಫೌಂಡೇಶನ್ ಸದಸ್ಯರು ಕೂಡ ಕೈಜೋಡಿಸಿದ್ದಾರೆ. ನಮ್ಮ ಕಾರ್ಯಕರ್ತರು ವಿವಿಧ ರೀತಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದ್ರು.
ಈಗಾಗಲೇ ಗೋಕಾಕ್ ತಾಲೂಕಿನ ಕೊರೊನಾ ವಾರಿಯರ್ಸ್ಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಲಾಗಿದೆ. ಇಂದು ಯಮಕನಮರಡಿ ಮತಕ್ಷೇತ್ರ ಹಾಗೂ ಬೆಳಗಾವಿ ತಾಲೂಕಿನ ವಾರಿಯರ್ಸ್ಗಳಿಗೆ ವಿತರಣೆ ಮಾಡಲಾಗುತ್ತಿದೆ.
ಬೇರೆ ಕಡೆಯಿಂದ ಬೇಡಿಕೆಗಳು ಬಂದರೆ, ಅಲ್ಲಿಯೂ ಇವುಗಳನ್ನು ಕೊಡಲಾಗುವುದು. ಅಗತ್ಯವಿರುವವರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ ಎಂದರು.
ಇಂದು ಒಟ್ಟು 2,000 ಮಾಸ್ಕ್ ಹಾಗೂ 2,500 ಸ್ಯಾನಿಟೈಸರ್ ಕೊರೊನಾ ವಾರಿಯರ್ಸ್ಗಳಿಗೆ ವಿತರಣೆ ಮಾಡಲಾಗುತ್ತಿದೆ. ಅಗತ್ಯವಿರುವ ಸೋಂಕಿತರಿಗೆ 40 ಸಿಲಿಂಡರ್ ವಿತರಣೆ ಮಾಡಲು ನಿರ್ಧರಿಸಲಾಗಿದೆ.
ಎಲ್ಲರಿಗೂ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಆಗುವುದಿಲ್ಲ. ಹೀಗಾಗಿ, ಮನೆಯಲ್ಲೇ ಚಿಕಿತ್ಸೆ ಪಡೆಯುವವರಿಗೆ ಆಕ್ಸಿಜನ್ ಸಿಲಿಂಡರ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಪಿಪಿಇ ಕಿಟ್ ವಿತರಣೆ : ಸತೀಶ್ ಜಾರಕಿಹೊಳಿ ಪುತ್ರ, ಯುವ ಮುಖಂಡ ರಾಹುಲ್ ಜಾರಕಿಹೊಳಿ ಕೂಡ ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದು, ಕೊರೊನಾ ಮುಂಚೂಣಿಯಲ್ಲಿರುವ ಕಾರ್ಯಕರ್ತರಿಗೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರಿಗೆ ಪಿಪಿಇ ಕಿಟ್ಗಳನ್ನು ವಿತರಿಸಿದರು.