ಬೆಳಗಾವಿ : ರಾಷ್ಟ್ರ ರಾಜಕಾರಣದ ಚಾಣಕ್ಯರೆಂದೇ ಗುರುತಿಸಿಕೊಂಡಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ಸಂಜೆ ವಿಧಿವಶರಾಗಿದ್ದಾರೆ. ಆದರೆ, ಪ್ರಣಬ್ ಮುಖರ್ಜಿ ಅವರಿಂದು ನಮ್ಮೊಂದಿಗೆ ಇಲ್ಲದಿದ್ರೆ ಏನಂತೆ? ಇಲ್ಲಿನ ಜನರ ಮನದಲ್ಲಿ ಸದಾ ಇರುತ್ತಾರೆ. ಪ್ರಣವ್ ಮುಖರ್ಜಿ ರಾಷ್ಟ್ರಪತಿ ಆಗಿದ್ದಾಗ ಹಲವು ಸಲ ಬೆಳಗಾವಿಗೆ ಭೇಟಿ ನೀಡಿದ್ದಾರೆ. ಬೆಳಗಾವಿಯ ಕೀರ್ತಿಯನ್ನು ಹೆಚ್ಚಿಸಿದ ಹಲವು ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ.

ಅಲ್ಲದೇ ಬೆಳಗಾವಿಗರಾದ ಚಂದ್ರಶೇಖರ್ ಕಂಬಾರ ಅವರು ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದಾಗ ಪ್ರಣಬ್ ಅವರೇ ಬೆಳಗಾವಿಗೆ ಬಂದು ಪ್ರಶಸ್ತಿ ನೀಡಿದ್ದು ವಿಶೇಷವಾಗಿತ್ತು. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಸಾಹಿತಿಯ ತವರಲ್ಲಿ ಜ್ಞಾನಪೀಠ ಪ್ರದಾನ ಮಾಡಲಾಗಿತ್ತು. ತವರು ಜಿಲ್ಲೆಯಲ್ಲಿ ಪ್ರಶಸ್ತಿ ಸ್ವೀಕರಿಸುವ ಅವಕಾಶ ಗಿಟ್ಟಿಸಿಕೊಂಡ ಚಂದ್ರಶೇಖರ್ ಕಂಬಾರ್ ಅವರು ಪ್ರೀತಿ, ಖುಷಿಯಿಂದಲೇ ರಾಷ್ಟ್ರಪತಿಗಳಿಂದ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದರು.

ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಸುವರ್ಣಸೌಧವನ್ನು ಪ್ರಣಬ್ ಮುಖರ್ಜಿ ಅವರೇ ಲೋಕಾರ್ಪಣೆಗೊಳಿಸಿದ್ದಾರೆ. 2012 ಅ.11ರಂದು ಸೌಧವನ್ನು ಲೋಕಾರ್ಪಣೆಗೊಳಿಸಿದ್ದ ಪ್ರಣಬ್ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ದರು. ಇದೇ ಸುವರ್ಣಸೌಧದಲ್ಲೇ ಪ್ರಣಬ್ ಅವರು ಚಂದ್ರಶೇಖರ್ ಕಂಬಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಿದ್ದರು.

ಅಲ್ಲದೇ ಸ್ವಾಮಿ ವಿವೇಕಾನಂದ ಅವರು ವಾಸವಿದ್ದ ಮನೆಯ ನವೀಕರಣಕ್ಕೆ ಪ್ರಣಬ್ ಅವರೇ ಶಿಲಾನ್ಯಾಸ ನೆರವೇರಿಸಿದ್ದರು. ಬೆಳಗಾವಿಯ ರಿಸಾಲ್ದಾರ್ ಗಲ್ಲಿಯಲ್ಲಿ ಸ್ವಾಮಿ ವಿವೇಕಾನಂದರು ವಾಸವಿದ್ದ ಮನೆ ಕೂಡ ಉದ್ಘಾಟನೆಗೊಂಡಿದೆ. ಹಣಕಾಸು ಮಂತ್ರಿ ಆಗಿದ್ದಾಗಲೂ ಪ್ರಣಬ್ ಬೆಳಗಾವಿಗೆ ಬಂದಿದ್ದರು. 2012ರಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ 11ನೇ ಘಟಿಕೋತ್ಸವದಲ್ಲಿ ಅವರು ಭಾಗಿಯಾಗಿದ್ದು ನಮಗೆ ಸಿಕ್ಕ ಸೌಭಾಗ್ಯ.
