ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸುವ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆಯೇ ಈಗ ಬಹುತೇಕ ಕಡೆಗಳಲ್ಲಿ ಬಂಡಾಯದ ಭೀತಿ ಎದುರಾಗಿದೆ. ಕ್ರಾಂತಿಯ ನೆಲ ಬೈಲಹೊಂಗಲದಲ್ಲಿ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ. ವಿಶ್ವನಾಥ ಪಾಟೀಲರ ವಿರುದ್ಧ ಬಂಡಾಯವೆದ್ದ ಜಗದೀಶ್ ಮೆಟಗುಡ್ಡಗೆ ಈ ಬಾರಿ ಬಿಜೆಪಿ ಮಣೆ ಹಾಕಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಪಾಟೀಲ ಈ ಬಾರಿ ಬಂಡಾಯದ ಬಾವುಟ ಹಾರಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ರಾಜ್ಯದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದ್ದ ಅಥಣಿ ಮತಕ್ಷೇತ್ರದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಆಪ್ತ ಮಹೇಶ ಕುಮಟಳ್ಳಿಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಂಡಾಯವೆದ್ದಿದ್ದಾರೆ. ಈಗಾಗಲೇ ಬಿಜೆಪಿಗೆ ರಾಜೀನಾಮೆ ಸಲ್ಲಿಸಲು ಮುಂದಾಗಿರುವ ಸವದಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದರೂ ಅಚ್ಚರಿಯಿಲ್ಲ.
ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಡಾ.ರವಿ ಪಾಟೀಲ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಹಾಲಿ ಶಾಸಕ ಅನಿಲ್ ಬೆನಕೆಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಟಿಕೆಟ್ ಘೋಷಣೆಯಾದ ಬಳಿಕ ಬೆಳಗಾವಿ ಲೋಕಸಭಾ ಸಂಸದೆ ಮಂಗಳಾ ಅಂಗಡಿ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಹಾಲಿ ಶಾಸಕ ಅಭಯ ಪಾಟೀಲಗೆ ಟಿಕೆಟ್ ಸಿಗುತ್ತಿದ್ದಂತೆ ಅವರ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಈ ಕ್ಷೇತ್ರದಲ್ಲಿ ಮರಾಠಾ ಸಮುದಾಯದ ಮತಗಳು ನಿರ್ಣಾಯಕವಾಗಿರುವುದರಿಂದ ದಕ್ಷಿಣ ಮತಕ್ಷೇತ್ರದಲ್ಲಿ ಮರಾಠ ಸಮುದಾಯದವರಿಗೆ ಟಿಕೆಟ್ ನೀಡಬೇಕೆಂದು ರಮೇಶ ಜಾರಕಿಹೊಳಿ ಮೂಲಕ ಹೈಕಮಾಂಡ್‌ವರೆಗೂ ಲಾಬಿ ನಡೆಸಿದ್ದ ರಾಜ್ಯ ಬಿಜೆಪಿ ಓಬಿಸಿ ಮೋರ್ಚಾ ಕಾರ್ಯದರ್ಶಿ ಕಿರಣ್ ಜಾಧವ್ ಈಗ ಮುನಿಸಿಕೊಂಡಿದ್ದಾರೆ.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಮೇಶ ಜಾರಕಿಹೊಳಿ ಆಪ್ತ ನಾಗೇಶ ಮನ್ನೋಳ್ಕರ್ಗೆ ಟಿಕೆಟ್ ಘೋಷಣೆಯಾಗಿದೆ. ಆದರೆ ಇಲ್ಲಿನ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಸಂಜಯ ಪಾಟೀಲ ಪಕ್ಷದ ವಿರುದ್ಧ ಹೋಗುವ ಮಾತೇ ಇಲ್ಲ. ಪಕ್ಷ ತೆಗೆದುಕೊಂಡ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಎಸ್ಟಿ ಮೀಸಲು ಕ್ಷೇತ್ರ ಯಮಕನಮರಡಿಯಲ್ಲಿ ಬಸವರಾಜ ಹುಂದ್ರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಕಳೆದ ಬಾರಿ ಸ್ಪರ್ಧೆ ಮಾಡಿದ್ದ ಮಾರುತಿ ಅಷ್ಟಗಿಗೆ ಟಿಕೆಟ್ ಕೈ ತಪ್ಪಿದೆ. ಇದರಿಂದ ಅಸಮಾಧಾನಗೊಂಡಿರುವ ಅಷ್ಟಗಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಕಣ್ಣೀರು ಸುರಿಸಿದ್ದಾರೆ.
ರಾಮದುರ್ಗ ಕ್ಷೇತ್ರದಲ್ಲಿ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಸೈಡಲೈನ್ ಮಾಡಿ ಇತ್ತಿಚೆಗಷ್ಟೇ ಬಿಜೆಪಿ ಸೇರಿದ್ದ ಚಿಕ್ಕ ರೇವಣ್ಣಗೆ ಟಿಕೆಟ್ ನೀಡಿರುವುದು ಯಾದವಾಡ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಮೂಲ ಬಿಜೆಪಿ ಕಾರ್ಯಕರ್ತರ ಕೆಂಗಣ್ಣಿಗೂ ಗುರಿಯಾಗಿದೆ. ಮಹಾದೇವಪ್ಪ ಸಹೋದರ ಮಲ್ಲಣ್ಣ ಯಾದವಾಡ ಜೆಡಿಎಸ್‌ನಿಂದ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದ್ದು, ಸದ್ಯ ಇವರ ನಡೆ ತೀವ್ರ ಕುತೂಹಲ ಮೂಡಿಸಿದೆ.
ಸವದತ್ತಿ ಕ್ಷೇತ್ರದಲ್ಲಿ ದಿ. ಆನಂದ ಮಾಮನಿ ಅವರ ಪತ್ನಿ ರತ್ನಾ ಮಾಮನಿ ಅವರಿಗೆ ಟಿಕೇಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಹಲವು ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಸವದತ್ತಿ ಬಿಜೆಪಿಯಲ್ಲಿ ಬಂಡಾಯ ಅಭ್ಯರ್ಥಿ ಸ್ಪರ್ಧೆ ಮಾಡದಿದ್ದರೂ, ಹಲವಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಕಡೆ ಮುಖ ಮಾಡಿದ್ದು, ಅಭ್ಯರ್ಥಿ ರತ್ನಾ ಮಾಮನಿ ಚಿಂತೆಗೀಡಾಗುವಂತೆ ಮಾಡಿದೆ.
ಅತೀ ಹೆಚ್ಚು ಆಕಾಂಕ್ಷಿಗಳಿದ್ದ ಖಾನಾಪುರ ಕ್ಷೇತ್ರದಲ್ಲಿ ಈ ಬಾರಿಯೂ ವಿಠಲ ಹಲಗೇಕರ್ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದ್ದು, ಇನ್ನುಳಿದ ಆಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಮಾಜಿ ಶಾಸಕ ಅರವಿಂದ ಪಾಟೀಲ ಪಕ್ಷೇತರವಾಗಿ ಸ್ಪರ್ಧಿಸುವ ಸಾಧ್ಯತೆಯಿದ್ದು, ಇದು ಬಿಜೆಪಿ ಅಭ್ಯರ್ಥಿಗೆ ಉರುಳಾಗಲಿದೆ.
ಇದನ್ನೂ ಓದಿ:ಲಕ್ಷ್ಮಣ್ ಸವದಿ ಬಂದ್ರೆ ಕಾಂಗ್ರೆಸ್‌ಗೆ ಒಳ್ಳೆಯದು: ರಾಜು ಕಾಗೆ