ಬೆಳಗಾವಿ: ಬೆಂಗಳೂರಿನ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಾದ ಗಲಾಟೆ ಕಾಂಗ್ರೆಸ್ ಗಲಾಟೆ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಧ್ವಜಾರೋಹಣದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಕಾಂಗ್ರೆಸ್ ಪಕ್ಷದವರು ಸತ್ಯ ಶೋಧನಾ ಸಮಿತಿ ರಚಿಸಿದ್ದಾರೆ. ಅವರೇ ಪ್ರಕರಣಕ್ಕೆ ಕಾರಣ ಹುಡುಕುತ್ತಾರೆ. ಅಖಂಡ ಶ್ರೀನಿವಾಸ ಮೂರ್ತಿ ಒಳ್ಳೆಯ ಶಾಸಕ. ಅವರಿಗೆ ಅನ್ಯಾಯ ಆಗಬಾರದು. ಅವರಿಗೆ ಏನು ಸಹಕಾರ ಬೇಕೋ ಅದನ್ನ ಕೊಡುತ್ತೇವೆ ಎಂದರು.
ಎಸ್ಡಿಪಿಐ ಹಾಗೂ ಪಿಎಫ್ಐ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಗೃಹ ಸಚಿವರು ಈಗಾಗಲೇ ಉತ್ತರ ನೀಡಿದ್ದಾರೆ. ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಕಠಿಣ ನಿರ್ಧಾರ ಕೈಗೊಳ್ಳುತ್ತಾರೆ. ನಮ್ಮ ಗೃಹ ಸಚಿವರು ಸಮರ್ಥರಿದ್ದಾರೆ. ಎಲ್ಲವನ್ನೂ ಸರಿಪಡಿಸುತ್ತಾರೆ. ಬೆಂಗಳೂರಿನ ಗಲಾಟೆ ತನಿಖೆ ಹಂತದಲ್ಲಿದೆ. ಈಗ ಮಾತನಾಡುವುದು ಸೂಕ್ತವಲ್ಲ. ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಪೀರನವಾಡಿಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ನಡೆದ ಗಲಾಟೆಗೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಸಮಾಜದವರು ಮೂರ್ತಿ ಪ್ರತಿಷ್ಠಾಪಿಸಬೇಕಾದರೆ ಕಾನೂನು ಪ್ರಕಾರ ಅನುಮತಿ ಪಡೆಯಬೇಕು. ರಾತ್ರೋರಾತ್ರಿ ತರಾತುರಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಸರಿಯಲ್ಲ. ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಲು ಯತ್ನಿಸಿದವರಿಗೆ ನಾನು ಮನವಿ ಮಾಡ್ತೇನೆ. ನಾನು ಆ ಯುವಕರ ಪರವಾಗಿದ್ದೇನೆ. ಕಾನೂನು ಪ್ರಕಾರ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಪ್ರವಾಹ ಹಾಗೂ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಬದ್ಧವಾಗಿದೆ. ಈ ಸಲ ಪ್ರವಾಹ ಬರದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಕೋವಿಡ್ನಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಂಡಿದೆ. ಮುಂದೆ ಅಭಿವೃದ್ಧಿ ಕಾರ್ಯ ತ್ವರಿತವಾಗಿ ಆಗಲಿದೆ ಎಂದರು.
ಗಡಿ ವಿಚಾರ ಕುರಿತು ಮಾತನಾಡಿ, ಗಡಿ ವಿಷಯವೇ ಶಿವಸೇನೆ ಅಜೆಂಡಾ. ಅದರ ಹೋರಾಟದಿಂದ ಅವರು ಅಧಿಕಾರಕ್ಕೆ ಬಂದಿದ್ದಾರೆ. ನಾವಿಲ್ಲಿ ಎಲ್ಲಾ ಧರ್ಮೀಯರು, ಭಾಷಿಕರು ಅನ್ಯೋನ್ಯವಾಗಿದ್ದೇವೆ. ಮಹಾಜನ ಆಯೋಗದ ವರದಿಯನ್ನು ನಾವೆಲ್ಲರೂ ಒಪ್ಪಿದ್ದೇವೆ ಎಂದರು.