ಬೆಳಗಾವಿ: ಗೋವಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿಯಾಗಿ ಮಾತುಕತೆ ನಡೆಸಿದ್ದು, ಉಭಯ ನಾಯಕರ ಭೇಟಿ ಕುತೂಹಲ ಕೆರಳಿಸಿದೆ.
ಗೋವಾದ ಬಿಚೋಲಿಮ್, ಸಾಕ್ಲಿ, ಮಾಯೇಮ್ ಕ್ಷೇತ್ರದಲ್ಲಿ ಮನೆಗೆ ಮನೆಗೆ ತೆರಳಿ ಅಮಿತ್ ಶಾ ಮತಯಾಚನೆ ಮಾಡಿದರು. ಪ್ರಚಾರದ ವೇಳೆ ಬಿಚೋಲಿಂ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಶಾ ಅವರನ್ನು ಭೇಟಿಯಾದರು.
ಕೇಂದ್ರ ಗೃಹ ಸಚಿವರ ಜೊತೆ ಕೆಲಕಾಲ ರಮೇಶ್ ಜಾರಕಿಹೊಳಿ ಪ್ರಚಾರದಲ್ಲಿ ಭಾಗಿಯಾದರು. ಬಳಿಕ ಗೋಕಾಕ್ ಕ್ಷೇತ್ರದಲ್ಲಿ ನಿರ್ಮಾಣವಾಗಲಿರುವ ಗಟ್ಟಿ ಬಸವಣ್ಣ ಡ್ಯಾಂ ಕಾಮಗಾರಿಗೆ ಚಾಲನೆ ನೀಡಲು ಅಮಿತ್ ಶಾಗೆ ಆಹ್ವಾನ ನೀಡಿದರು. ಜೊತೆಗೆ ಕಾರ್ಯಕ್ರಮಕ್ಕೆ ಬರುವುದಾಗಿ ಅಮಿತ್ ಶಾ ತಿಳಿಸಿದ್ದಾರೆ ಎನ್ನಲಾಗಿದೆ.
ರಾತ್ರಿ ಭೋಜನ ಕೂಟದಲ್ಲಿ ಅಮಿತ್ ಶಾ ಜೊತೆಗೆ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಗೋವಾ ಸಿಎಂ ಪ್ರಮೋದ್ ಸಾವಂತ್, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಸಿಡಿ ಪ್ರಕರಣ ಸಂಬಂಧ ಎಸ್ಐಟಿ, ಬಿ ರಿಪೋರ್ಟ್ ಸಲ್ಲಿಸಿದೆ. ಹೀಗಾಗಿ, ಸಚಿವ ಸಂಪುಟ ವಿಸ್ತರಣೆ ವೇಳೆ ಪರಿಗಣಿಸುವಂತೆ ದೇವೇಂದ್ರ ಫಡ್ನವಿಸ್ ಮೂಲಕ ರಮೇಶ್ ಜಾರಕಿಹೊಳಿ ಅಮಿತ್ ಶಾ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.