ಚಿಕ್ಕೋಡಿ: ಬಸ್ ನಿಲ್ದಾಣದ ಕಟ್ಟಡದಲ್ಲೇ ಡಿಪೋ ಕಂಟ್ರೋಲರ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ಬಸ್ ನಿಲ್ದಾಣದ ಕಟ್ಟಡದ ಮೊದಲ ಮಹಡಿಯಲ್ಲಿ ಶಿವಾನಂದ ಭಜಂತ್ರಿ (48) ಸಾವಿಗೆ ಶರಣಾಗಿದ್ದಾರೆ.
ಇಂದು ಬೆಳಗ್ಗೆ ಸಿಬ್ಬಂದಿ ಬಸ್ ನಿಲ್ದಾಣಕ್ಕೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ರಾಯಬಾಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಪೋ ಮುಂದೆ ಬಿಎಂಟಿಸಿ ಬಸ್ ಚಾಲಕ ಆತ್ಮಹತ್ಯೆ: ದೇವನಹಳ್ಳಿಯಲ್ಲಿರುವ ಬಿಎಂಟಿಸಿ ಬಸ್ ಡಿಪೋ ಮುಂದೆಯೇ ಬಸ್ ಚಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಇತ್ತೀಚೆಗೆ ನಡೆದಿತ್ತು. ದೇವನಹಳ್ಳಿ ಪಟ್ಟಣದ ಹಳೆಯ ಬಸ್ ನಿಲ್ದಾಣದ ಡಿಪೋ ಬಳಿ ಘಟನೆ ನಡೆದಿದ್ದು, ದೇವನಹಳ್ಳಿ ತಾಲೂಕಿನ ಆವತಿ ಮೂಲದ 45 ವರ್ಷದ ನಾಗೇಶ್ ಆತ್ಮಹತ್ಯೆಗೆ ಶರಣಾದ ಚಾಲಕ. ಬಿಎಂಟಿಸಿ ಬಸ್ ಚಾಲಕ ಕಂ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ನಾಗೇಶ್ ಅವರು ಕೆಲವು ದಿನಗಳಿಂದ ಮಾನಸಿಕವಾಗಿ ನೊಂದಿದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದರು.
ಹಿಂದಿನ ದಿನ ಮಧ್ಯರಾತ್ರಿ ಡಿಪೋಗೆ ಬಂದ ನಾಗೇಶ್ ಅವರು ಡಿಪೋ ಮ್ಯಾನೇಜರ್ ಕೊಠಡಿಯ ಎದುರೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಳಗ್ಗೆ ಡಿಪೋಗೆ ಸಿಬ್ಬಂದಿ ಬಂದಾಗ ನಾಗೇಶ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಗಮನಿಸಿದ್ದರು. ತಕ್ಷಣ ದೇವನಹಳ್ಳಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಾಗೇಶ್ ಅವರ ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗದ ಕಾರಣ ಪೊಲೀಸ್ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.
ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ: ತಾನು ಐಎಎಸ್ ಅಧಿಕಾರಿ ಆಗಬೇಕೆಂಬ ಕನಸು ನನಸಾಗಿಲ್ಲವೆಂದು ಮನನೊಂದು ಬ್ಯಾಂಕ್ ಒಂದರ ಮಹಿಳಾ ಅಧಿಕಾರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯದಲ್ಲಿ ಇತ್ತೀಚೆಗೆ ನಡೆದಿತ್ತು. ಕಾವೇರಿ ಗ್ರಾಮೀಣ ಬ್ಯಾಂಕ್ನ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕಿ ಶೃತಿ ಆತ್ಮಹತ್ಯೆ ಮಾಡಿಕೊಂಡಿದ್ದ ಅಧಿಕಾರಿ. ಚಿಕ್ಕಮಗಳೂರಿನಿಂದ ಮಂಡ್ಯದ ಬ್ಯಾಂಕ್ಗೆ ಎರಡು ತಿಂಗಳ ಹಿಂದೆಯಷ್ಟೇ ಬಂದಿದ್ದರು. ಅಲ್ಲೇ ಬಾಡಿಗೆ ಮನೆ ಮಾಡಿಕೊಂಡಿದ್ದ ಶೃತಿ, ತಂದೆಗೆ ಕರೆ ಮಾಡಿ, ತಾನು ದೇವರ ಬಳಿ ಹೋಗುತ್ತಿದ್ದೇನೆ ತನ್ನನ್ನು ಕ್ಷಮಿಸಿ ಬಿಡು ಎಂದು ಹೇಳಿ ಕರೆ ಖಡಿತಗೊಳಿಸಿ ನೇಣಿಗೆ ಶರಣಾಗಿದ್ದರು.
ಇದನ್ನೂ ಓದಿ: ದೇವನಹಳ್ಳಿ: ಬಿಎಂಟಿಸಿ ಬಸ್ ಡಿಪೋ ಮುಂದೆಯೇ ಬಸ್ ಚಾಲಕ ಆತ್ಮಹತ್ಯೆ