ಚಿಕ್ಕೋಡಿ: ಕಬ್ಬು ಕಟಾವು ವಿಚಾರದಲ್ಲಿ ಸಹೋದರರ ಮಧ್ಯೆ ಗಲಾಟೆ ನಡೆದು ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಸವಸುದ್ದಿ ಗ್ರಾಮದಲ್ಲಿ ನಡೆದಿದೆ. ಶ್ರೀಶೈಲ ಬಾಳಗೌಡ ಪಾಟೀಲ್ ತನ್ನ ಸಹೋದರ ಮಹಾದೇವ ಬಾಳಗೌಡ ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಕಬ್ಬು ಕಾಟಾವು ವಿಚಾರವಾಗಿ ಇಬ್ಬರ ನಡುವೆ ನಡುವೆ ನಡೆದ ಗಲಾಟೆಯಲ್ಲಿ ಸಹೋದರನ ವಿರುದ್ಧ ಕೋಪಗೊಂಡ ಶ್ರೀಶೈಲ ಪಾಟೀಲ್ ಎರಡು ಸುತ್ತು ಗಾಳಿಯಲ್ಲಿ ಗುಂಡನ್ನು ಹಾರಿಸಿ ಮಹದೇವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಜಗಳ ತಾರಕಕ್ಕೇರಿ ಇಬ್ಬರು ಕೈಕೈ ಮಿಲಾಹಿಸಿಕೊಂಡಿದ್ದು ಚಿಕ್ಕ ಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಹಾರೋಗೆರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ : ಇನ್ನೊಂದೆಡೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಚಿಕ್ಕೋಡಿ ಸಬ್ ರಿಜಿಸ್ಟ್ರಾರ್ ಜಿ.ಪಿ. ಶಿವರಾಜು ಎಂಬವರು 30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಎಸ್.ಪಿ ಯಶೋಧಾ ವಂಟಗೂಡಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಜಮೀನು ಖಾತೆ ಬದಲಾವಣೆ ವಿಚಾರವಾಗಿ ಸಬ್ ರಿಜಿಸ್ಟ್ರಾರ್ ಅವರು ರಾಜು ಎಂಬುವವರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ರಾಜು ಎಂಬುವವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ ಹಿನ್ನೆಲೆ ಸಬ್ ರಿಜಿಸ್ಟ್ರಾರ್ ಸಹಾಯಕ ಹುಸೇನ್ ಹಾಗೂ ಸಬ್ ರಿಜಿಸ್ಟ್ರಾರ್ ಶಿವರಾಜುವನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಮೆಂಟ್ ತುಂಬಿದ್ದ ಲಾರಿ ಕದ್ದ ಆರೋಪಿ ಅಂದರ್: 440 ಸಿಮೆಂಟ್ ಮೂಟೆಗಳಿದ್ದ ಲಾರಿಯನ್ನು ಕದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯ ಬ್ಯಾಂಕ್ ಸರ್ಕಲ್ನ ಕಾವೇರಿ ಗೋಡೌನ್ ಬಳಿ ಜನವರಿ 8ರಂದು ಗೋಡೌನ್ ಮುಂದೆ ನಿಲ್ಲಿಸಲಾಗಿದ್ದ 440 ಸಿಮೆಂಟ್ ಮೂಟೆಗಳನ್ನು ತುಂಬಿದ ಲಾರಿಯ ಕಳ್ಳತನವಾಗಿತ್ತು. ಇದೀಗ ಪ್ರಕರಣಕ್ಕೆ ಆರೋಪಿ ನರಸಿಂಹಮೂರ್ತಿಯನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ ಬಂಧಿತ ಆರೋಪಿಯಿಂದ ಕಳವು ಮಾಡಲಾಗಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿತ್ತು.
ತಾಲೂಕಿನ ರಘುನಾಥಪುರ ನಿವಾಸಿ ಮಲ್ಲೇಶ್ ಅವರು ಲಾರಿಯ ಮಾಲೀಕರಾಗಿದ್ದು, ಇವರ ಬಳಿ ಸುರೇಶ್ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಜನವರಿ 8 ರಂದು ವೀರಾಪುರ ಗ್ರಾಮದ ಬಳಿಯ ಬಿರ್ಲಾ ಸೂಪರ್ ಸಿಮೆಂಟ್ ಪ್ಯಾಕ್ಟರಿಯಿಂದ 440 ಸಿಮೆಂಟ್ ಮೂಟೆಗಳನ್ನ ಅಶೋಕ ಲೈಲ್ಯಾಂಡ್ ಲಾರಿಗೆ ಲೋಡ್ ಮಾಡಲಾಗಿತ್ತು, ಸಂಜೆ 4:30 ಸಮಯದಲ್ಲಿ ಲೋಡ್ ಮಾಡಲಾದ ಸಿಮೆಂಟ್ ಮೂಟೆಗಳನ್ನ ಬಾಶೆಟ್ಟಿಹಳ್ಳಿಯ ಕಾವೇರಿ ಗೋಡೌನ್ ಗೆ ಆನ್ಲೋಡ್ ಮಾಡಲು ತರಲಾಗಿತ್ತು. ಆದರೆ ಗೋಡೌನ್ ಬಾಗಿಲು ಬೀಗ ಹಾಕಿದ್ದ ಹಿನ್ನೆಲೆ ಚಾಲಕ ಸುರೇಶ್ ಲಾರಿಯನ್ನ ಅಲ್ಲಿಯೇ ನಿಲ್ಲಿಸಿ ಮನೆಗೆ ಬಂದಿದ್ದರು.
ಮರುದಿನ ಜನವರಿ 9ರ ಬೆಳಗ್ಗೆ 8:45ರ ಸಮಯದಲ್ಲಿ ಲಾರಿ ಚಾಲಕ ಸುರೇಶ್ ಗೋಡೌನ್ ಬಳಿ ಬಂದು ನೋಡಿದಾಗ ಸ್ಥಳದಲ್ಲಿ ಲಾರಿ ಇಲ್ಲದಿರುವುದು ಕಂಡು ಬಂದಿತ್ತು. ಬಳಿಕ ಲಾರಿಯನ್ನು ಕಳವು ಮಾಡಲಾಗಿದ್ದಾಗಿ ಚಾಲಕ ಸುರೇಶ್ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: ಹಾಡಹಗಲೇ ಮದ್ದೂರು ತಾಲೂಕು ಕಚೇರಿ ಆವರಣದಲ್ಲೇ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ