ಬೆಳಗಾವಿ: ದೇಶದಲ್ಲಿ ಅವಾಂತರ ಸೃಷ್ಟಿಸುತ್ತಿರುವ ಕೊರೊನಾ ನಿಯಂತ್ರಣಕ್ಕೆ ಜಾರಿಗೊಳಿಸಲಾಗಿದ್ದ ಕ್ವಾರಂಟೈನ್ ಅಸ್ತ್ರಕ್ಕೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಿರೀಕ್ಷಿಸಿದಷ್ಟು ಫಲ ಸಿಕ್ಕಿಲ್ಲ.
ಕೋವಿಡ್ ಕುರಿತಾದ ಜಾಗೃತಿ ಕೊರತೆ ಕಾರಣ ಕ್ವಾರಂಟೈನ್ ಪಾಲನೆ ಜಿಲ್ಲೆಯಲ್ಲಿ ಹಿನ್ನೆಡೆ ಅನುಭವಿಸುತ್ತಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈಟಿವಿ ಭಾರತಕ್ಕೆ ನೀಡಿರುವ ಮಾಹಿತಿಯಂತೆ ಬೆಳಗಾವಿ ಜಿಲ್ಲೆಯಲ್ಲಿ ಈವರೆಗೆ 5,805 ಜನರು ಸಾಂಸ್ಥಿಕ ಕ್ವಾರಂಟೈನ್ ಹಾಗೂ 8,627 ಜನ ಹೋಮ್ ಕ್ವಾರಂಟೈನ್ ಅವಧಿ ಪೂರೈಸಿದ್ದಾರೆ. ಬಹುತೇಕ ಕಡೆ ಸಾಂಸ್ಥಿಕ ಕ್ವಾರಂಟೈನ್ ಯಶಸ್ವಿಯಾಗಿವೆ. ಆದ್ರೆ ಹೋಮ್ ಕ್ವಾರಂಟೈನ್ ಅಷ್ಟೇನೂ ಫಲ ನೀಡಿಲ್ಲ.
ಇನ್ನೊಂದೆಡೆ, ಸರ್ಕಾರಗಳು ಕೂಡ ಕ್ವಾರಂಟೈನ್ ಮಾರ್ಗಸೂಚಿಗಳನ್ನು ಪದೆ ಪದೇ ಬದಲಿಸುತ್ತಿದ್ದು, ಕ್ವಾರಂಟೈನ್ ಅವಧಿಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ. ಕೊರೊನಾ ವರದಿ ಬರುವ ಮುನ್ನವೇ ಕ್ವಾರಂಟೈನ್ ಅವಧಿ ಮುಗಿದ ಹಲವರನ್ನು ಮನೆಗೆ ಕಳಿಸಲಾಗಿದೆ. ಕೊರೊನಾ ಗುಣಲಕ್ಷಣಗಳಿಲ್ಲ ಎಂಬ ಕಾರಣಕ್ಕೆ ಜಿಲ್ಲಾಡಳಿತ ಮನೆಗೆ ಕಳುಹಿಸಿದ್ದ ಅನೇಕರಲ್ಲಿ ನಂತರ ಸೋಂಕು ವಕ್ಕರಿಸಿದ ಅನೇಕ ಉದಾಹರಣೆಗಳು ಜಿಲ್ಲೆಯಲ್ಲಿ ನಡೆದಿವೆ.
ಜಿಲ್ಲಾಡಳಿತ ಹದ್ದಿನ ಕಣ್ಣಿಗೂ ಕ್ಯಾರೆ ಎನ್ನದ ಶಂಕಿತರು:
ಸಾಂಸ್ಥಿಕ ಕ್ವಾರಂಟೈನ್ ಅವಧಿ ಬಳಿಕ 14 ದಿನ ಹೋಮ್ ಕ್ವಾರಂಟೈನ್ನಲ್ಲಿರಬೇಕೆಂಬ ಎಂಬ ನಿಯಮಗಳಿವೆ. ಹೋಮ್ ಕ್ವಾರಂಟೈನಲ್ಲಿರುವವರ ಮೇಲೆ ನಿಗಾ ಇಡಲು ಜಿಲ್ಲಾಡಳಿತ ಕ್ವಾರಂಟೈನ್ ಆ್ಯಪ್ ಬಳಸುತ್ತಿದೆ. ಪ್ರತಿ ಶಂಕಿತ ಕ್ವಾರಂಟೈನ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಆ್ಯಪ್ ಮೂಲಕ ಜಿಲ್ಲಾಡಳಿತ ಶಂಕಿತರ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿದೆ. ಆದ್ರೆ ಹಲವರು ಜಿಲ್ಲಾಡಳಿತದ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ. ಮೊಬೈಲ್ ಮನೆಯಲ್ಲಿ ಬಿಟ್ಟು ಅನೇಕರು ಹೊರಗಡೆ ಸುತ್ತಾಡಿ ಬರುತ್ತಿದ್ದಾರೆ. ಕೋವಿಡ್ ಕುರಿತಾದ ಜಾಗೃತಿ ಕೊರತೆಯೇ ಇದಕ್ಕೆ ಮೂಲ ಕಾರಣ ಎನ್ನುತ್ತಾರೆ ವೈದ್ಯರು.
600ಕ್ಕೂ ಅಧಿಕ ಜನರ ಮೇಲೆ ಎಫ್ಐಆರ್!
ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಜಿಲ್ಲೆಯ 600ಕ್ಕೂ ಅಧಿಕ ಶಂಕಿತರ ವಿರುದ್ಧ ಜಿಲ್ಲಾಡಳಿತ ಈವರೆಗೆ ಪ್ರಕರಣ ದಾಖಲಿಸಿದೆ. ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ಹಗಲಿರಳು ಶ್ರಮಿಸುತ್ತಿದ್ದರೂ, ಶಂಕಿತರು ಮಾತ್ರ ಕೊರೊನಾ ಕುರಿತಾಗಿ ಎಚ್ಚರಿಕೆ ವಹಿಸುತ್ತಿಲ್ಲ.
ದೇಶದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರದಿಂದ ಬರುವವರನ್ನು 14 ದಿನ ಹೋಮ್ ಕ್ವಾರಂಟೈನ್ ಮಾಡಬೇಕೆಂದು ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಆದೇಶ ಹೊರಡಿಸಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುತ್ತಿರುವವರು ಹೋಮ್ ಕ್ವಾರಂಟೈನ್ ಅವಧಿ ಅಚ್ಚುಕಟ್ಟಾಗಿ ಪಾಲಿಸಿದ್ರೆ ಉತ್ತಮ. ಇಲ್ಲದಿದ್ರೆ ಗಡಿ ಜಿಲ್ಲೆಗೆ ಕಂಟಕ ತಪ್ಪಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು, ಜಿಲ್ಲಾಡಳಿತ ಯಾವ ಹೆಜ್ಜೆ ಇರಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ.