ಬೆಳಗಾವಿ : ಗೋಕಾಕ ನಗರದ ಪ್ರವಾಹ ಪೀಡಿತ ಸಂತ್ರಸ್ತರಿಗೆ, ಮತ್ತು ವಸತಿ ರಹಿತ ಕಡುಬಡವರಿಗೆ ನಗರದಲ್ಲಿರುವ ಸರ್ವೇ ನಂಬರ್ 244/ಏ ಯಲ್ಲಿ ಬರುವ 312 ಎಕರೆ ಭೂಪ್ರದೇಶವನ್ನು ಮನೆ ನಿರ್ಮಾಣ ಮಾಡಿಕೊಳ್ಳಲು ನೀಡಬೇಕೆಂದು ಆಗ್ರಹಿಸಿ ನಗರದ ನಿವಾಸಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ನಗರದ ಸುಮಾರು 2000ಕ್ಕಿಂತಲೂ ಹೆಚ್ಚಿನ ಜನರು ನಿವೇಶನಗಳನ್ನು ಕಳೆದುಕೊಂಡಿದ್ದು, ಬಾಡಿಗೆ ಮನೆಗಳಲ್ಲಿದ್ದ 3000ಕ್ಕಿಂತಲೂ ಹೆಚ್ಚಿನ ಜನರು ವಸತಿರಹಿತರಾಗಿದ್ದಾರೆ. ಇವರಿಗೆ ಶಾಶ್ವತ ನಿವಾಸಗಳನ್ನು ಕಲ್ಪಿಸಲು ನಗರ ವ್ಯಾಪ್ತಿಯಲ್ಲಿರುವ ಸರ್ವೇ ನಂಬರ್ 344/ಏಯಲ್ಲಿ ಇರುವ 312 ಏಕರೆ 10ಗುಂಟೆ ಸರ್ಕಾರಿ ಭೂಪ್ರದೇಶವನ್ನು ಮಿಲ್ಗೆ ಲೀಸ್ ನೀಡಲಾಗಿದ್ದು, ಆ ಪ್ರದೇಶ ಖಾಲಿ ಬಿದ್ದಿದೆ ಅದನ್ನು ನಿರಾಶ್ರಿತರಿಗೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅಶೋಕ ಪೂಜಾರಿ ಮಾತನಾಡಿ ಗೋಕಾಕ ನಗರದಲ್ಲಿ ಅತಿದೊಡ್ಡ ನೆರೆ ಹಾವಳಿಯಿಂದ ಹಲವಾರು ಕುಟುಂಬಗಳು ನಿವೇಶನ ಕಳೆದುಕೊಂಡಿದ್ದು ಸರ್ಕಾರ ಅವರಿಗೆ ಶಾಶ್ವತ ನಿವೇಶನ ಒದಗಿಸುವುದು ಅನಿವಾರ್ಯವಾಗಿದೆ ಆದ್ದರಿಂದ ಗೋಕಾಕ ಮಿಲ್ ಲೀಜ್ ಪಡೆದಿರುವ ಸರ್ವೇನಂಬರ್ 244/ಏ ಭೂಪ್ರದೇಶವು ಪಾಳು ಬಿದ್ದಿದ್ದು ಅದನ್ನು ನಿರಾಶ್ರಿತರಿಗೆ ನೀಡಬೇಕೆಂದು ಆಗ್ರಹಿಸಿದರು.