ಬೆಳಗಾವಿ: ಖಾನಾಪುರ ತಾಲ್ಲೂಕಿನ ಪಶ್ಚಿಮ ಅರಣ್ಯ ಭಾಗದಲ್ಲಿರುವ ಗ್ರಾಮಗಳಿಗೆ ಸುಗಮ ಸಂಚಾರಕ್ಕೆ ಸಮರ್ಪಕ ರಸ್ತೆಗಳನ್ನು ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಅಲ್ಲಿನ ನಿವಾಸಿಗಳು ಡಿಸಿ ಕಚೇರಿ ಎದುರು ಸೇರಿ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಖಾನಾಪುರ ತಾಲೂಕಿನ ಪಶ್ಚಿಮ ಭಾಗದ ದಟ್ಟ ಅರಣ್ಯ ಪ್ರದೇಶದಲ್ಲಿರುವ ಕಾಪೋಲಿ, ಚಾಪೋಲಿ, ಮುಡಗೈ ಮತ್ತು ಚಿರೆಖಾನಿ ಗ್ರಾಮಗಳಿಗೆ ಇದುವರೆಗೂ ವ್ಯವಸ್ಥಿತ ರಸ್ತೆ ಸೌಲಭ್ಯವಿಲ್ಲ. ಹೈನುಗಾರಿಕೆ ಪ್ರಧಾನವಾಗಿರುವ ಈ ಗ್ರಾಮಗಳಿಗೆ ಸೂಕ್ತ ರಸ್ತೆಗಳಿಲ್ಲ. ಇರುವ ರಸ್ತೆಗಳೂ ಸಹ ಹದಗೆಟ್ಟಿದ್ದು ಬಸ್ ಗಳು, ಆಂಬ್ಯುಲೆನ್ಸ್ ಹಾಗೂ ಹಾಲಿನ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ ಎಂದು ನಿವಾಸಿಗಳು ತಮ್ಮ ಅಳಲು ತೊಡಗಿಕೊಂಡರು.
ಈ ರಸ್ತೆ ಮಾರ್ಗದಲ್ಲಿ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ, ನೌಕರರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ನಿತ್ಯ ತೊಂದರೆಯಾಗುತ್ತಿದೆ. ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಡುವಂತಾಗಿದ್ದು, ಗ್ರಾಮಸ್ಥರು ಮುಖ್ಯವಾಗಿ ಹೈನುಗಾರಿಕೆ ಕೃಷಿಯನ್ನು ಅವಲಂಬಿಸಿದ್ದಾರೆ. ಆದ್ದರಿಂದ ಆದಷ್ಟು ಬೇಗ ಇಲ್ಲಿಯ ರಸ್ತೆಗಳನ್ನು ದುರಸ್ಥಿಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.