ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಹಿರೇಹಟ್ಟಿಹೊಳಿ ಗ್ರಾಮದ ಸಂತ್ರಸ್ತರು ನೆರೆ ಪರಿಹಾರಕ್ಕಾಗಿ ಹಾಗೂ ಗ್ರಾಮದ ಪುನರ್ವಸತಿಗೆ ಆಗ್ರಹಿಸಿ ಖಾನಾಪುರ ತಹಶೀಲ್ದಾರ್ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
1953ರಲ್ಲಿ ಮಲಪ್ರಭಾ ನದಿಯಿಂದ ಮುಳುಗಡೆಯಾಗಿದ್ದ ಈ ಗ್ರಾಮಕ್ಕೆ ಈವರೆಗೆ ಪುನರ್ವಸತಿ ಕಲ್ಪಿಸಿಲ್ಲ. ಅಲ್ಲದೆ 2019-20ರಲ್ಲಿ ಸಂಭವಿಸಿದ ಭಾರಿ ಪ್ರವಾಹದಿಂದಲೂ ಈ ಗ್ರಾಮದ ಜನರು ಮನೆ ಮಠ ಕಳೆದುಕೊಂಡು ಅತಂತ್ರರಾಗಿದ್ದಾರೆ. ತಕ್ಷಣವೇ ನೆರೆ ಪರಿಹಾರ ನೀಡಬೇಕು ಹಾಗೂ ಗ್ರಾಮದ ಪುನರ್ವಸತಿ ಕಲ್ಪಿಸಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ. ಸಂತ್ರಸ್ತರಿಗೆ ರೈತ ಸಂಘಟನೆ ಮುಖಂಡರು ಸಾಥ್ ನೀಡಿದ್ದಾರೆ.
ಪ್ರತಿಭಟನೆ ಕೈಬಿಡುವಂತೆ ತಹಶೀಲ್ದಾರ್ ರೇಷ್ಮಾ ತಾಳಿಕೋಟಿ ಮನವಿ ಮಾಡಿಕೊಂಡರು. ಈ ವೇಳೆ ತಹಶೀಲ್ದಾರ್ ಹಾಗೂ ಪ್ರತಿಭಟನಾ ನಿರತರ ಮಧ್ಯೆ ವಾಗ್ವಾದ ನಡೆಯಿತು. ನಂತರ ಪ್ರತಿಭಟನೆ ಕೈಬಿಡದೇ ಹೋರಾಟಗಾರರು ಅಹೋರಾತ್ರಿ ಧರಣಿ ಮುಂದುವರೆಸಿದ್ದಾರೆ.
ತಹಶೀಲ್ದಾರ್ ಕಚೇರಿ ಎದುರೇ ರಾತ್ರಿಯ ಅಡುಗೆ ತಯಾರಿಸಿ ಸಂತ್ರಸ್ತರು ಹಾಗೂ ರೈತ ಮುಖಂಡರು ಊಟ ಸವಿದರು. ಪರಿಹಾರ ವಿತರಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪರಿಹಾರ ದೊರೆಯುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದಿದ್ದಾರೆ.