ಬೆಳಗಾವಿ : ಇಲ್ಲಿನ ಖಾಸಗಿ ತರಕಾರಿ ಮಾರುಕಟ್ಟೆ ರದ್ದುಗೊಳಿಸಿ, ಎಪಿಎಂಸಿ ತರಕಾರಿ ಮಾರುಕಟ್ಟೆ ಉಳಿಸುವಂತೆ ಆಗ್ರಹಿಸಿ ನಡೆಸುತ್ತಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ರೈತರು, ವರ್ತಕರು ವಾಪಸ್ ಪಡೆದರು.
ಇಲ್ಲಿನ ಎಪಿಎಂಸಿ ಆವರಣದಲ್ಲಿ ನಡೆಸಲಾಗುತ್ತಿದ್ದ ಅಮರಣಾಂತ ಉಪವಾಸ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೋರಾಟಗಾರರ ಮನವೊಲಿಸಿದರು. ರೈತ ಮುಖಂಡ ಸಿದ್ದನಗೌಡ ಮೋದಗಿ ಅವರಿಗೆ ಎಳನೀರು ಕುಡಿಸಿದರು.
6ನೇ ದಿನಕ್ಕೆ ರೈತ ಮುಖಂಡ ಸಿದ್ದನಗೌಡ ಮೋದಗಿ ಉಪವಾಸ ಸತ್ಯಾಗ್ರಹ ಅಂತ್ಯವಾಯಿತು. ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ವಾಪಸ್ ಪಡೆದ ಹೋರಾಟಗಾರರು ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ.
ಖಾಸಗಿ ಮಾರುಕಟ್ಟೆ ಬಂದ್ ಮಾಡುವಂತೆ ನಡೆಸುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲವಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತ ವಿರೋಧಿ ಆಗಿದೆ. ಎಪಿಎಂಸಿ ಉಳಿವಿಗಾಗಿ ರೈತರು, ವ್ಯಾಪಾರಸ್ಥರ ಹೋರಾಟಕ್ಕೆ ಬೆಂಬಲ ಇದೆ ಎಂದು ಡಿಕೆಶಿ ಅಭಯ ನೀಡಿದರು. ಎಪಿಎಂಸಿ ವರ್ತಕರು, ರೈತ ಮುಖಂಡರ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರೆಯಲಿದೆ.