ಬೆಂಗಳೂರು/ ಬೆಳಗಾವಿ : ರಾಜ್ಯದ 31 ಜಿಲ್ಲೆಯ 195 ಬ್ಲಾಕ್ಗಳಲ್ಲಿ ಬರಗಾಲ ಪರಿಸ್ಥಿತಿ ಇದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವ 100 ದಿನಗಳನ್ನು 150 ದಿನಗಳಿಗೆ ಹೆಚ್ಚಿಸಿ, 18 ಕೋಟಿ ಮಾನವ ದಿನಗಳನ್ನು ನೀಡಲು ಕೇಂದ್ರಕ್ಕೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೂ ಪರಿಗಣಿಸದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಈ ಕುರಿತು ಮರು ಪ್ರಸ್ತಾವನೆ ಸಲ್ಲಿಸಲು ಕ್ರಮವಹಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಶೂನ್ಯ ವೇಳೆಯಲ್ಲಿ ಶಾಸಕ ಶಿವಲಿಂಗೇಗೌಡ ಅವರು ನರೇಗಾ ಕೂಲಿ ದಿನಗಳ ಹೆಚ್ಚಳದ ಕುರಿತು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ರಾಜ್ಯ ಸರ್ಕಾರವು ರಾಜ್ಯದಲ್ಲಿ ಬರ ಪರಿಸ್ಥಿತಿ ಘೋಷಿಸುವ ಪೂರ್ವದಿಂದಲೇ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನೀಡುವ ಮಾನವ ದಿನಗಳನ್ನು 100 ರಿಂದ 150ಕ್ಕೆ ಹೆಚ್ಚಿಸಲು ಮನವಿ ಸಲ್ಲಿಸಲಾಗಿತ್ತು. ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 19, 2023 ರವರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಆಯುಕ್ತರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಸ್ವತಃ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದು, ಇದಕ್ಕೆ ಉತ್ತರವಾಗಿ ಅಕ್ಟೋಬರ್ 31 ರಂದು ಮರು ಸಂದೇಶ ಬಂದಿದೆ. ಆದರೆ, ನಿನ್ನೆ ದಿನ ಸಂಸತ್ ಕಲಾಪದಲ್ಲಿ ಕೇಂದ್ರ ಸಚಿವರು ಕರ್ನಾಟಕ ರಾಜ್ಯ ಸರ್ಕಾರದಿಂದ ಈ ಕುರಿತು ಪ್ರಸ್ತಾವನೆ ಸ್ವೀಕರಿಸಿಲ್ಲ ಎಂದು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರವು ಈ ಹಿಂದಿನ ಪ್ರಸ್ತಾವನೆಗಳನ್ನು ಉಲ್ಲೇಖಿಸಿ ಮತ್ತೊಮ್ಮೆ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನೀಡುವ ಮಾನವ ದಿನಗಳನ್ನು 100 ರಿಂದ 150ಕ್ಕೆ ಹೆಚ್ಚಿಸಲು ಮರು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸದನದಲ್ಲಿ ತಿಳಿಸಿದರು.
ನಾಲ್ಕು ಲಕ್ಷ ರೈತರ ಕೃಷಿ ಪಂಪ್ಸೆಟ್ಗಳಿಗೆ ಮೂಲಸೌಕರ್ಯ .. ಜಾರ್ಜ್ : ರಾಜ್ಯದ ನಾಲ್ಕು ಲಕ್ಷ ರೈತರ ಕೃಷಿ ಪಂಪ್ಸೆಟ್ಗಳಿಗೆ ಸರ್ಕಾರದಿಂದ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಅವರು ವಿಧಾನಸಭೆಯಲ್ಲಿ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ನೋಂದಾಯಿಸಲ್ಪಟ್ಟ 500 ಮೀಟರ್ ವ್ಯಾಪ್ತಿಯೊಳಗಡೆ ಇರುವ ಪಂಪ್ ಸೆಟ್‍ಗಳಿಗೆ ವಿದ್ಯುತ್ ಸರಬರಾಜು ಕಂಪನಿಗಳಿಂದ ಮೂಲ ಸೌಕರ್ಯ ಒದಗಿಸಲಾಗುವುದು ಎಂದರು.
ಇದನ್ನೂ ಓದಿ : ನಾಲ್ಕು ಲಕ್ಷ ರೈತರ ಕೃಷಿ ಪಂಪ್ ಸೆಟ್‍ಗಳಿಗೆ ಮೂಲ ಸೌಕರ್ಯ: ಸಚಿವ ಕೆ ಜೆ ಜಾರ್ಜ್