ಚಿಕ್ಕೋಡಿ: ರಾಜ್ಯದಲ್ಲೇ ಅತಿ ಹೆಚ್ಚು ಕಬ್ಬು ಬೆಳೆಯನ್ನು ಬೆಳಗಾವಿ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಆದರೆ ಕಬ್ಬು ಕಟಾವು ಮಾಡಿ ಸಾಗಿಸುವ ಕಾರ್ಮಿಕರಿಗೆ ನ್ಯಾಯಯುತ ಸಂಬಳ ಸಿಗದೆ ಇರೋದ್ರಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಈ ಸಮಸ್ಯೆಗಳ ಕುರಿತಾಗಿ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚೆ ನಡೆಸುವಂತೆ ಚಿಕ್ಕೋಡಿ ಭಾಗದ ಕಬ್ಬು ಕಟಾವು ಕಾರ್ಮಿಕರು ಒತ್ತಾಯಿಸಿದ್ದಾರೆ.
ಮೂರು ವರ್ಷಗಳಿಂದ ಕಾರ್ಮಿಕರಿಗೆ ಪ್ರತಿ ಟನ್ 324 ರೂ ನೀಡುತ್ತಿದ್ದು, ಈ ಕೂಲಿ ದರವನ್ನು ಸಕ್ಕರೆ ಕಾರ್ಖಾನೆಗಳು ಹೆಚ್ಚಿಸಬೇಕು. ಈ ಕುರಿತು ಸಕ್ಕರೆ ಕಾರ್ಖಾನೆಗಳೊಂದಿಗೆ ಸರ್ಕಾರ ಮಾತುಕತೆ ನಡೆಸಿ ಕಾರ್ಮಿಕರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ಸುಧಾರಿತ ಕಬ್ಬು ಮಷಿನ್ನಿಂದ ಕಟಾವು ಮಾಡಿದರೆ ಕಾರ್ಖಾನೆಯವರು ಪ್ರತಿ ಟನ್ ಕಬ್ಬು ಕಟಾವಿಗೆ 450 ರೂ. ನೀಡುತ್ತಿದ್ದಾರೆ. ಆದರೆ ಕಾರ್ಮಿಕರು ಕಟಾವು ಮಾಡಿದ ಕಬ್ಬಿಗೆ 324 ರೂ ನಿಗದಿಪಡಿಸಲಾಗಿದೆ. ಆದಷ್ಟು ಬೇಗ ಈ ತಾರತಮ್ಯ ಹೋಗಲಾಡಿಸಬೇಕು. ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ನಡೆಸಿ ತಾರತಮ್ಯ ನೀತಿಯನ್ನು ಹೋಗಲಾಡಿಸಬೇಕೆಂದು ಮನವಿ ಮಾಡಿದ್ದಾರೆ.
ಕಬ್ಬು ಕಟಾವು ಕಾರ್ಮಿಕ ಭೀಮಪ್ಪ ಸನದಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಸಕ್ಕರೆ ಕಾರ್ಖಾನೆಗಳು ಕಾರ್ಮಿಕರ ಸಂಬಳ ಹೆಚ್ಚಿಸಿಲ್ಲ. ಟನ್ ಕಬ್ಬು ಕಟಾವಿಗೆ 324 ಕೂಲಿ ಕೊಡುತ್ತಾರೆ. ಮೂರು ವರ್ಷಗಳಿಂದ ನಮಗೆ ಸಂಬಳ ಏರಿಕೆ ಭಾಗ್ಯವಿಲ್ಲ. ಬೆಳಗಾವಿ ಅಧಿವೇಶನದಲ್ಲಿ ನಮ್ಮ ಬಗ್ಗೆ ಕಾರ್ಮಿಕರ ಸಮಸ್ಯೆ ಬಗ್ಗೆ ಸಚಿವರು ಚರ್ಚಿಸಬೇಕು. ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳು ಅನುಸರಿಸುತ್ತಿರುವ ದ್ವಂದ್ವ ನಿಲುವಿನಿಂದ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ. ಮಷಿನ್ನಿಂದ ಕಟಾವು ಆಗಿರುವ ಒಂದು ಟನ್ ಕಬ್ಬಿಗೆ ನೀಡುವ 450 ರೂ ದರವನ್ನು ಸಕ್ಕರೆ ಕಾರ್ಖಾನೆಗಳು ಕಾರ್ಮಿಕರಿಗೂ ವಿಸ್ತರಿಸಬೇಕು. ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ತಂತ್ರವನ್ನು ಸಕ್ಕರೆ ಕಾರ್ಖಾನೆಗಳು ಕೈಬಿಡಬೇಕು ಎಂದರು.
ಇಂದಿನ ದಿನಗಳಲ್ಲಿ ದಿನಬಳಕೆ ವಸ್ತುಗಳ ದರ ಗಗನಕ್ಕೇರುತ್ತಿರುವಾಗ ನಾವು ಜೀವನ ಸಾಗಿಸುವುದು ಕಷ್ಟಕರವಾಗಿದೆ. ಆದಷ್ಟು ಬೇಗ ಕಬ್ಬು ಕಟಾವು ದರ ಹೆಚ್ಚಿಸಲು ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆ ಸಭೆ ನಡೆಸಬೇಕು. ಕನಿಷ್ಠ 450 ರಿಂದ 500 ರೂ. ಅನ್ನು ಪ್ರತಿ ಟನ್ ಕಬ್ಬು ಕಟಾವಿಗೆ ನಿಗದಿಪಡಿಸಬೇಕೆಂದು ಕಾರ್ಮಿಕರು ಆಗ್ರಹಿಸಿದ್ದಾರೆ.
ಇದನ್ನೂಓದಿ:'ಇನ್ವೆಸ್ಟ್ ಕರ್ನಾಟಕ'ದಿಂದ ₹5.41 ಲಕ್ಷ ಕೋಟಿ ಹೂಡಿಕೆಗೆ ಒಡಂಬಡಿಕೆ: ಸಚಿವ ಎಂ.ಬಿ.ಪಾಟೀಲ್