ಚಿಕ್ಕೋಡಿ : ರೈತನೋರ್ವನ ಪುತ್ರ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ 532ನೇ ರ್ಯಾಂಕ್ ಪಡೆಯುವುದರ ಮೂಲಕ ಇಡೀ ರೈತರ ಮಕ್ಕಳಿಗೆ ಮಾದರಿಯಾಗಿದ್ದಾರೆ.
ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ಪ್ರಫುಲ್ ದೇಸಾಯಿ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 532ನೇ ರ್ಯಾಂಕ್ ಪಡೆದಿದ್ದಾರೆ. ಇವರು ರೈತಾಪಿ ಕುಟುಂಬ ಹಿನ್ನೆಲೆಯಿಂದ ಬಂದವರು. ತಂದೆ ಕೆಂಪಣ್ಣ ದೇಸಾಯಿ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದು, ಸದ್ಯ ಮಗನ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಫುಲ್ ದೇಸಾಯಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಕ್ಕೇರಿ ತಾಲೂಕಿನ ಶಾಲೆಯಲ್ಲಿ ಹಾಗೂ ಪಿಯುಸಿಯನ್ನು ಸಂಕೇಶ್ವರ ಪಟ್ಟಣದ ಕಾಲೇಜಿನಲ್ಲಿ ಮುಗಿಸಿದ್ದಾರೆ. ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾರೆ.
ಮನಸ್ಸು ಮಾಡಿದರೆ ಏನೂ ಬೇಕಾದರೂ ಸಾಧಿಸಬಹುದು ಎಂದು ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡುವ ಮೂಲಕ ತೋರಿಸಿಕೊಟ್ಟಿದ್ದಾರೆ. ಇತರೆ ಗ್ರಾಮೀಣ ಭಾಗದ ಯುವಕರಿಗೆ ಹಾಗೂ ರೈತರ ಮಕ್ಕಳಿಗೆ ಮಾದರಿಯಾಗಿದ್ದಾರೆ.
ಹಲವಾರು ತೊಂದರೆಗಳ ನಡುವೆಯೂ ಪದವಿ ಮುಗಿಸಿ, ನಂತರ ಯುಪಿಎಸ್‌ಸಿ ಪರೀಕ್ಷೆ ತಯಾರಿ ನಡೆಸಿದರು. ದೆಹಲಿ ಖಾಸಗಿ ತರಬೇತಿ ಸಂಸ್ಥೆಯಲ್ಲಿ ಕೆಲ ತಿಂಗಳು ತರಬೇತಿ ಪಡೆದು ನಂತರ ಬೆಂಗಳೂರಿಗೆ ಬಂದು ಯುಪಿಎಸ್‌ಸಿ ತರಬೇತಿ ಪಡೆದರು. ಈ ಮಧ್ಯದಲ್ಲಿಯೇ ಕೆಲ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದರ ಮೂಲಕ ಜಲಸಂಪನ್ಮೂಲ ಇಲಾಖೆಯ ಪರೀಕ್ಷೆಯಲ್ಲಿ ತೇರ್ಗಡೆಯಾದರು.
ಕಳೆದ ಒಂದೂವರೆ ವರ್ಷದಿಂದ ಜಲಸಂಪನ್ಮೂಲ ಇಲಾಖೆಯಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದರೂ ಸಹ ಯಶಸ್ಸು ಸಿಕ್ಕಿರಲಿಲಲ್ಲ. ಆದರೆ, ಛಲ ಬಿಡದೆ ಪರೀಕ್ಷೆಗಾಗಿ ಓದಿ 3ನೇ ಬಾರಿ ತೇರ್ಗಡೆಯಾಗಿ ಯಶಸ್ಸಿಗೆ ಪಾತ್ರರಾಗಿದ್ದಾರೆ.