ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕ ದೇವಸ್ಥಾನ ಹಾಗೂ ಸವದತ್ತಿ ಯಲ್ಲಮ್ಮನ ದೇವಸ್ಥಾನ ತೆರೆಯುವಂತೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಚಿಂಚಲಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಮಸೀದಿ, ಚರ್ಚ್‌ಗಳಿಗೆ ಪ್ರಾರ್ಥನೆ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ ಹಿಂದೂ ದೇವಸ್ಥಾನಗಳಿಗೆ ಮಾತ್ರ ಕೋವಿಡ್ ಹೆಸರಿನಲ್ಲಿ ನಿರ್ಬಂಧ ಹೇರಲಾಗಿದೆ. ರಾಜಕೀಯ ಸಭೆ ಸಮಾರಂಭಗಳಲ್ಲಿ ಲಕ್ಷಾಂತರ ಜನ ಸೇರಬಹುದು. ಆದರೆ ದೇವಸ್ಥಾನಗಳಿಗೆ ಬರುವಂತಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಕೂಡಲೇ ಜಿಲ್ಲಾಧಿಕಾರಿಗಳು ದೇವಸ್ಥಾನ ತೆರೆಯಲು ಆದೇಶ ಮಾಡಬೇಕು. ಇಲ್ಲವಾದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಬಳಿ ಲಕ್ಷಾಂತರ ಹಿಂದೂಗಳು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ಎಂಪಿ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನೂ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಹಲವಾರು ಹಿಂದೂ ಕಾರ್ಯಕ್ರಮಗಳಲ್ಲಿ ಹಾಗೂ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದೆನೆ. ನನಗೆ ಬಿಜೆಪಿ ಪಕ್ಷ ಟಿಕೆಟ್ ನೀಡಿದರೆ ಬೆಳಗಾವಿಯಲ್ಲಿ ಸ್ಪರ್ಧಿಸುವೆ. ಆದರೆ ಸ್ವತಂತ್ರವಾಗಿ ಸ್ಪರ್ಧಿಸುವುದಿಲ್ಲ ಎಂದರು.