ಬೆಳಗಾವಿ: ಕೆಲ ದಿನಗಳಿಂದ ಬೆಳಗಾವಿ ಮಹಾನಗರ ಪಾಲಿಕೆ ಎದುರು ಅಳವಡಿಸಿದ್ದ ಕನ್ನಡ ಧ್ವಜ ಮಾಸಿ ಹರಿದುಹೋಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ಕನ್ನಡ ಧ್ವಜ ಹಾಕುವಂತೆ ಕನ್ನಡ ಸಂಘಟನೆ ಮುಖಂಡರು ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲದೆ ಇಂದು ಧ್ವಜ ಅಳವಡಿಸಲು ಮುಂದಾದಾಗ, 10 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಒತ್ತಾಯಪೂರ್ವಕವಾಗಿ ವಶಕ್ಕೆ ಪಡೆದಿದಕ್ಕೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ತೀವ್ರ ವಿರೋಧದ ನಡುವೆ 2020ರ ಡಿ.28ರಂದು ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ಚಜಸ್ತಂಭ ಅಳವಡಿಸಲಾಗಿತ್ತು. ಕಳೆದ ಆರು ತಿಂಗಳಿಂದ ಮಳೆ, ಬಿಸಿಲು ಗಾಳಿಗೆ ಬಣ್ಣ ಮಾಸಿ, ಹರಿದಿರುವ ಧ್ವಜ ಬದಲಾವಣೆಗೆ ಆಗ್ರಹಿಸಿ ಪ್ರತಿಭಟನೆ ನಡೆದಿತ್ತು. ಹಳೆಯ ಧ್ವಜ ತೆರವುಗೊಳಿಸಿ ಹೊಸ ಧ್ವಜ ಅಳವಡಿಸಲು ಪ್ರತಿಭಟನಾಕಾರರು ಒತ್ತಾಯಿಸಿದ್ದರು.
ಇದೀಗ ಹೊಸ ಧ್ವಜದ ಸಮೇತ ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡಪರ ಹೋರಾಟಗಾರ ಶ್ರೀನಿವಾಸ್ ತಾಳೂಕರ್, ವಾಜೀದ್ ಹಿರೇಕೂಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಮೂರು ತಿಂಗಳಿಂದ ಮನವಿ ಮಾಡುತ್ತಿದ್ದರೂ ಧ್ಚಜ ಬದಲಾವಣೆ ಆಗುತ್ತಿಲ್ಲ. ಜಿಲ್ಲಾಡಳಿತ ಉದ್ದೇಶಪೂರ್ವಕವಾಗಿ ಈ ರೀತಿ ನಡೆದುಕೊಳ್ಳುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಕನ್ನಡ ಧ್ವಜ ಹಾಗೂ ಹಗ್ಗ ತೆಗೆದುಕೊಂಡು ಬಂದಿರುವ ಕನ್ನಡಪರ ಹೋರಾಟಗಾರರ ಕೊರಳಿಗೆ ಹಗ್ಗ ಹಾಕಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಧ್ವಜಸ್ತಂಭ ಸುತ್ತ ಬ್ಯಾರಿಕೇಡ್ ಅಳವಡಿಸಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿ ಹಾಗೂ ಹೋರಾಟಗಾರರ ಮಧ್ಯೆ ವಾಗ್ವಾದ ನಡೆಯಿತು. ನಾವು ಹೊಸ ಕನ್ನಡ ಧ್ವಜ ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ. ನೀವು ಇಲ್ಲಿಂದ ತೆರಳಿ ಎಂದ ಎಸಿಪಿ ಸದಾಶಿವ ಕಟ್ಟಿಮನಿ ಮನವಿ ಮಾಡಿದರು.