ಬೆಳಗಾವಿ: ನಾನು ಖ್ಯಾತ ಜ್ಯೋತಿಷಿ, ಚಾಮುಂಡಿ ದೇವಿಯ ಆರಾಧಕ, ಮೂರೇ ದಿನಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಕೊಡೊತ್ತೇನೆ ಎಂದು ಹೇಳಿ ಅಮಾಯಕ ಮಹಿಳೆಯರಿಂದ ಆನ್ಲೈನ್ನಲ್ಲೇ ಹಣ ಪಡೆದು, ವಂಚನೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಯಚೂರಿನ ಸಿಂಧನೂರು ಗ್ರಾಮದ ಬಸವರಾಜ್ ದುರ್ಗಪ್ಪ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ತಾನು ಖ್ಯಾತ ಜ್ಯೋತಿಷಿ, ಚಾಮುಂಡಿ ದೇವಿ ಆರಾಧಕ, ಮೂರೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತೇನೆ ಎಂದು ಭಿತ್ತಿಪತ್ರಗಳನ್ನು ಮಾಡಿಸಿದ್ದ.
ಹೀಗೆ ಮಾಡಿಸಿದ ಐದು ಸಾವಿರ ಭಿತ್ತಿಪತ್ರಗಳನ್ನು ಬೆಳಗಾವಿಗೆ ಬಂದು ಪತ್ರಿಕೆ ಹಂಚುವ ಹುಡುಗರ ಕೈಯಲ್ಲಿ ನೀಡಿ, ಪತ್ರಿಕೆ ಜತೆಗೆ ಇದನ್ನೂ ಹಂಚಿ ಎಂದು ಹೇಳಿದ್ದಾನೆ. ಮೂರೇ ದಿನದಲ್ಲಿ ಆನ್ಲೈನ್ನಲ್ಲಿ ಪರಿಹಾರ ಸಿಗುತ್ತೆ ಅನ್ನೋದನ್ನ ಓದಿದ ಬೆಳಗಾವಿಯ ಇಬ್ಬರು ಮಹಿಳೆಯರು ತಮ್ಮ ಸಮಸ್ಯೆ ಹೇಳಿಕೊಂಡು ಆತನಿಗೆ ಕರೆ ಮಾಡಿದ್ದಾರೆ.
ಜ್ಯೋತಿಷಿಯಿಂದ ಮೋಸ ಹೋದ ಮಹಿಳೆಯರು: ಓರ್ವ ಮಹಿಳೆ ತನ್ನ ಮಗನಿಗೆ ಆರೋಗ್ಯ ಸಮಸ್ಯೆ ಇರುವ ಬಗ್ಗೆ ಹೇಳಿಕೊಂಡಿದ್ದಾಳೆ. ಎಲ್ಲವನ್ನೂ ಕೇಳಿದ ಬಸವರಾಜ ನಿಮ್ಮ ಮಗನಿಗೆ ಮಾಟ ಮಾಡಿಸಿದ್ದಾರೆ. ಅದನ್ನು ಸರಿಪಡಿಸಲು ಖರ್ಚಾಗುತ್ತೆ ಅಂತಾ ಹೇಳಿ ಹಣ ಹಾಕಿಸಿಕೊಂಡಿದ್ದಾನೆ. ಹೀಗೆ ಆ ಮಹಿಳೆಯಿಂದ 70 ಸಾವಿರ ರೂ. ಪಡೆದಿದ್ದಾನೆ. ಮೂರು ದಿನವಾದ್ರೂ ಸಮಸ್ಯೆ ಪರಿಹಾರ ಆಗದಿದ್ದಾಗ ಆತನಿಗೆ ಕರೆ ಮಾಡಿದ್ರೇ ಸರಿ ಆಗುತ್ತೆ ಅಂತಾ ಕಾಲ್ ಕಟ್ ಮಾಡಿ ನಂತರ ಅವರ ನಂಬರ್ ಬ್ಲಾಕ್ ಲಿಸ್ಟ್ಗೆ ಹಾಕಿದ್ದಾನೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ: ಓರ್ವ ಮಹಿಳೆ ಬಂಧನ, ಇಬ್ಬರು ವಿದೇಶಿಯರ ರಕ್ಷಣೆ
ಇನ್ನೂ ಕೆಲ ಮಹಿಳೆಯರು ಮಕ್ಕಳಾಗಿಲ್ಲ ಅಂತಾ ಕರೆ ಮಾಡಿ ಪರಿಹಾರ ಕೇಳಿದ್ರೆ, ಅವರಿಂದಲೂ ಪೂಜೆ, ಪರಿಹಾರದ ಹೆಸರು ಹೇಳಿ ಹಣ ಹಾಕಿಸಿಕೊಂಡಿದ್ದಾನೆ. ಈತನಿಂದ ಮೋಸ ಹೋಗಿರುವ ಇಬ್ಬರು ಮಹಿಳೆಯರು ಇದೀಗ ಬೆಳಗಾವಿಯ ಸಿಇಎನ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಇದರ ಜೊತೆಗೆ, ಫೋನ್ ಪೇ ಮೂಲಕ ಹಣ ಹಾಕಿದ್ದು ಮತ್ತು ಆರೋಪಿ ಬಸವರಾಜನ ಜೊತೆ ಮಾತನಾಡಿದ ಆಡಿಯೋಗಳನ್ನ ಪೊಲೀಸರಿಗೆ ನೀಡಿದ್ದಾರೆ. ಎಲ್ಲವನ್ನೂ ಪಡೆದುಕೊಂಡಿರುವ ಪೊಲೀಸರು ಆತನ ನಂಬರ್ ಆಧಾರದ ಮೇಲೆ ಪತ್ತೆ ಹಚ್ಚಿದ್ದಾರೆ. ಅಲ್ಲದೇ ಆತನ ಅಕೌಂಟ್ನಲ್ಲಿದ್ದ ನಾಲ್ಕು ಲಕ್ಷ ರೂ.ನನ್ನು ಜಪ್ತಿ ಮಾಡಿಕೊಂಡು, ಮೋಸ ಹೋಗಿದ್ದ ಮಹಿಳೆಯರಿಗೆ ಮರಳಿಸಿದ್ದಾರೆ. ಬಸವರಾಜ ದುರ್ಗಪ್ಪನನ್ನ ಬಂಧಿಸಿ, ಬೆಳಗಾವಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.