ಬೆಳಗಾವಿ: ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ತರಬೇತಿ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಜಿಲ್ಲೆಯ ಹೊರವಲಯದ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
"ರೆಡ್‌ಬರ್ಡ್ ಸಂಸ್ಥೆಗೆ ಸೇರಿದ ವಿಟಿ-ಆರ್ ಬಿಎಫ್ ತರಬೇತಿ ವಿಮಾನ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೊರಟಿತ್ತು. ಇಬ್ಬರು ಪ್ರಯಾಣಿಸುತ್ತಿದ್ದರು. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ" ಎಂದು ಸಾಂಬ್ರಾ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಇದನ್ನೂ ಓದಿ: ವಾಯುಪಡೆಯ ಹೆಲಿಕಾಫ್ಟರ್ ತುರ್ತು ಭೂಸ್ಪರ್ಶ: ತಪ್ಪಿದ ಅಪಾಯ
ಇತ್ತೀಚಿನ ಘಟನೆಗಳು: ಸೋಮವಾರ ಮಧ್ಯಪ್ರದೇಶದ ಭಿಂಡ್‌ನಲ್ಲಿ ವಾಯುಪಡೆಯ ಹೆಲಿಕಾಪ್ಟರ್ವೊಂದನ್ನು ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ ಹೆಲಿಕಾಪ್ಟರ್ ಟೇಕಾಫ್ ಆಗುವ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಭಿಂಡ್‌ನ ಕಡಿದಾದ ಮೈದಾನದಲ್ಲಿ ಇಳಿಸಲಾಗಿದೆ. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಅಪಾಚೆ ಅಟ್ಯಾಕ್ AH 64E ಆಗಿದ್ದು, ವಿಶ್ವದ ಅತ್ಯಂತ ಸುಧಾರಿತ ಯುದ್ಧ ಹೆಲಿಕಾಪ್ಟರ್ ಇದಾಗಿದೆ.
ಈ ಹೆಲಿಕಾಪ್ಟರ್ ಸೋಮವಾರ ಬೆಳಗ್ಗೆ ಗ್ವಾಲಿಯರ್ ಏರ್ಫೋರ್ಸ್ ಬೇಸ್‌ನಿಂದ ಟೇಕಾಫ್ ಆಗಿತ್ತು. ಆದರೆ, ಇದ್ದಕ್ಕಿದ್ದಂತೆ ಬೆಳಗ್ಗೆ 10 ಗಂಟೆಗೆ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಭಿಂಡ್ ಜಿಲ್ಲೆಯ ನಯಾ ಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಜಖ್ನೋಲಿ ಗ್ರಾಮದ ಬಳಿಯ ಕಡಿದಾದ ಮೈದಾನದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೈಲಟ್ ಲ್ಯಾಂಡಿಂಗ್ ಮಾಡಿದ್ದರು. ಲ್ಯಾಂಡ್ ಆಗುವಾಗ ಹೆಲಿಕಾಪ್ಟರ್‌ನಲ್ಲಿ ಇಬ್ಬರು ವಾಯುಸೇನೆಯ ಪೈಲಟ್‌ಗಳು ಇದ್ದರು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.
"ವಾಯುಪಡೆಯ ಅಪಾಚೆ ಎಹೆಚ್-64 ಹೆಲಿಕಾಪ್ಟರ್ ವಾಡಿಕೆಯ ಕಾರ್ಯಾಚರಣೆಯ ತರಬೇತಿಯ ಸಮಯದಲ್ಲಿ ಭಿಂಡ್ ಬಳಿ ಮುನ್ನೆಚ್ಚರಿಕೆಯಾಗಿ ಲ್ಯಾಂಡಿಂಗ್ ಮಾಡಿತು. ಎಲ್ಲ ಸಿಬ್ಬಂದಿ ಮತ್ತು ವಿಮಾನ ಸುರಕ್ಷಿತವಾಗಿದೆ. ತಾಂತ್ರಿಕ ದೋಷಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸರಿಪಡಿಸುವ ತಂಡವು ಸ್ಥಳವನ್ನು ತಲುಪಿದೆ” ಎಂದು ಐಎಎಫ್ ಟ್ವೀಟ್ ಮಾಡಿ ಮಾಹಿತಿ ತಿಳಿಸಿತ್ತು.
ಇನ್ನು ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗುತ್ತಿದ್ದಂತೆ ಸ್ಥಳೀಯರು ಅದನ್ನು ನೋಡಲು ಮುಗಿಬಿದ್ದಿದ್ದರು. ಕೆಲವರು ಹೆಲಿಕಾಪ್ಟರ್ ಬಳಿ ನಿಂತು ಸೆಲ್ಫಿ ತೆಗೆದುಕೊಂಡಿದ್ದರು. ತಾಂತ್ರಿಕ ದೋಷ ನಿವಾರಣೆ ಬಳಿಕ ಈ ಹೆಲಿಕಾಪ್ಟರ್ ಮತ್ತೆ ವಾಪಾಸ್ ಗ್ವಾಲಿಯರ್ ಏರ್ಫೋರ್ಸ್ ಬೇಸ್‌ಗೆ ಪ್ರಯಾಣ ಬೆಳೆಸಿತ್ತು.
ಇದನ್ನೂ ಓದಿ: ಪಾಟ್ನಾದಲ್ಲಿ ಬಾಂಗ್ಲಾದೇಶ ವಿಮಾನ ತುರ್ತು ಭೂಸ್ಪರ್ಶ
ಮಂಗಳೂರು ಏರ್ಪೋರ್ಟ್ ರನ್ ವೇಯಲ್ಲಿ ತಾಂತ್ರಿಕ ಸಮಸ್ಯೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಲ್ಯಾಂಡ್ ಆಗಬೇಕಿದ್ದ ವಿಮಾನ ಡೈವರ್ಟ್ ಮಾಡಲಾಗಿದ್ದು, ಸಮಸ್ಯೆ ಸರಿಪಡಿಸಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ವಿದ್ಯುತ್ ಕಡಿತಗೊಂಡಿತ್ತು. ಆದ್ದರಿಂದ ರನ್ ವೇನಲ್ಲಿರುವ ದೀಪಗಳು ಉರಿಯುತ್ತಿರಲಿಲ್ಲ. ಪರಿಣಾಮ ಮುಂಬೈನಿಂದ ಆಗಮಿಸಿದ ಇಂಡಿಗೋ 6E5188 ವಿಮಾನ ಲ್ಯಾಂಡ್ ಆಗದೇ ವಾಪಸ್ ಆಗಿದೆ. ಎಟಿಸಿ ಸೂಚನೆ ಹಿನ್ನೆಲೆಯಲ್ಲಿ ಕೇರಳದ ಕಣ್ಣೂರು ಏರ್ಪೋರ್ಟ್‌ನಲ್ಲಿ ಇದು ಲ್ಯಾಂಡ್ ಆಗಿತ್ತು. ಈ ಘಟನೆ ಭಾನುವಾರ ಸಂಜೆ ನಡೆದಿತ್ತು.