ಚಿಕ್ಕೋಡಿ: ಪತ್ನಿ ಸಾವಿನಿಂದ ಮನನೊಂದಿದ್ದ ಮಾಜಿ ಸೈನಿಕರೊಬ್ಬರು ತನ್ನ ನಾಲ್ವರು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದಲ್ಲಿ ನಡೆದಿದೆ.
ಬೋರಗಲ್ ಗ್ರಾಮದ ಗೋಪಾಲ ಹಾದಿಮನಿ (46) ಹಾಗೂ ಅವರ ಮಕ್ಕಳಾದ ಸೌಮ್ಯಾ ಹಾದಿಮನಿ (19), ಶ್ವೇತಾ ಹಾದಿಮನಿ (16), ಸಾಕ್ಷಿ ಹಾದಿಮನಿ (11), ಸೃಜನ್ ಹಾದಿಮನಿ (8) ಆತ್ಮಹತ್ಯೆಗೆ ಶರಣಾದವರು.
ಜುಲೈ 6 ರಂದು ಗೋಪಾಲ್ ಅವರ ಪತ್ನಿ ಜಯಾ ಬ್ಲ್ಯಾಕ್ ಫಂಗಸ್ ಸೋಂಕಿನಿಂದ ಮೃತಪಟ್ಟಿದ್ದರು. ಇದರಿಂದ ನೊಂದಿದ್ದ ಗೋಪಾಲ್ ಅವರು ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ನಾಲ್ವರು ಮಕ್ಕಳಿಗೆ ವಿಷ ನೀಡಿ ಆತ್ಮಹತ್ಯೆಗೆ ಶರಣಾದ ನಿವೃತ್ತ ಯೋಧ:
ಗೋಪಾಲ ಹಾದಿಮನಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಮೂರು ವರ್ಷಗಳ ಹಿಂದೆ ನಿವೃತ್ತಿಯಾಗಿದ್ದರು. ಹುಟ್ಟೂರಿಗೆ ಆಗಮಿಸಿ ಉಳುಮೆ ಮಾಡಲು ಆರಂಭಿಸಿದ್ದ ಇವರು ಪತ್ನಿ, ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗನಿದ್ದ. ಇವರು ಪತ್ನಿ ಜಯಶ್ರೀಯನ್ನ ಅತಿಯಾಗಿ ಪ್ರೀತಿಸುತ್ತಿದ್ದರು. ಆದ್ರೆ ಜುಲೈ 6ರಂದು ಪತ್ನಿ ಬ್ಲ್ಯಾಕ್ ಫಂಗಸ್ ಸೋಂಕಿಗೆ ಬಲಿಯಾಗಿದ್ದರು. ಇದರಿಂದಾಗಿ ಹೆಂಡತಿಯ ಅಗಲಿಕೆ ನೋವಿನಿಂದ ಬಳಲುತ್ತಿದ್ದರು. ಇತ್ತೀಚೆಗೆ ದಸಾರ ಹಬ್ಬವನ್ನು ಸಂಭ್ರಮಿಸದೇ ಹೆಂಡತಿಯ ಗುಂಗಿನಲ್ಲಿಯೇ ಕಳೆದಿದ್ದ. ಈ ವೇಳೆ ಕುಟುಂಬಸ್ಥರು ಗೋಪಾಲಗೆ ಸಮಾಧಾನ ಮಾಡಿ ಧೈರ್ಯ ತುಂಬಿದ್ದರು. ಆದರೂ ಕಳೆದ ರಾತ್ರಿ ಕುಟುಂಬಸ್ಥರ ಜೊತೆ ಊಟ ಮಾಡಿ ನಂತರ ಸಂಬಂಧಿಕರ ಜೊತೆ ದೂರವಾಣಿಯಲ್ಲಿ ಚೆನ್ನಾಗಿ ಮಾತನಾಡಿದ್ದ. ಬಳಿಕ ಮಲಗಲು ಹೋದಾಗ ಮಕ್ಕಳಿಗೆ ನೀರಿನಲ್ಲಿ ವಿಷ ಬೇರೆಸಿ ಕುಡಿಸಿ ನಂತರ ತಾನೂ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಳಗ್ಗೆ ಎಷ್ಟೊತ್ತಾದರೂ ಸಹ ಬಾಗಿಲು ತೆರೆಯದೆ ಇದ್ದದ್ದನ್ನು ಗಮನಿಸಿದ ಸ್ಥಳೀಯರು ಮೊದಲು ಕೂಗಿ ನೋಡಿದ್ದಾರೆ. ಮನೆಯ ಒಳಗಿನಿಂದ ಯಾವುದೇ ಪ್ರತಿಕ್ರಿಯೇ ಬಾರದೆ ಇದ್ದಾಗ ಬಾಗಿಲು ಮುರಿದು ಒಳ ಹೋಗಿ ನೋಡಿದಾಗ ಎಲ್ಲರೂ ಮೃತಪಟ್ಟರುವುದು ಗೊತ್ತಾಗಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ.
ಕಂಬನಿ ಮಿಡಿದ ಸಚಿವ ಕಾರಜೋಳ:
ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಾಜಿ ಯೋಧರೊಬ್ಬರು ತನ್ನ ಕುಟುಂಬದ ಸದಸ್ಯರಿಗೆ ವಿಷ ನೀಡಿ ತಾನೂ ಸಹಾ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಶೋಕ ವ್ಯಕ್ತಪಡಿಸಿರುವ ಸಚಿವ ಕಾರಜೋಳ, ಎಂತಹ ಪರಿಸ್ಥಿತಿಯಲ್ಲೂ ಡಿಪ್ರೆಶನ್ಗೆ ಒಳಗಾಗಿ ಜೀವ ಕಳೆದುಕೊಳ್ಳದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.