ಬೆಳಗಾವಿ : ಮಹಾನಗರ ಪಾಲಿಕೆಯ 48ನೇ ವಾರ್ಡ್ಗೆ ಒಳಪಡುವ ಬಸವನಕುಡಚಿಯ ಜನರ ಸಮಸ್ಯೆ ಆಲಿಸಲು ಕಳೆದ ನಾಲ್ಕು ದಶಕಗಳಿಂದ ಒಬ್ಬ ಪಾಲಿಕೆ ಆಯುಕ್ತರು ಭೇಟಿ ಕೊಟ್ಟಿಲ್ಲ ಎಂಬ ಆರೋಪ ಕೇಳಿಬಂದಿದೆ. 1984ರಲ್ಲಿ ಈ ಪಾಲಿಕೆ ಅಸ್ತಿತ್ವಕ್ಕೆ ಬಂದಿದೆ. ಆದರೆ ಈವರೆಗೆ ಒಬ್ಬರೇ ಒಬ್ಬ ಪಾಲಿಕೆ ಆಯುಕ್ತರು ಬಂದು ಜನರ ಸಮಸ್ಯೆ ಆಲಿಸಿಲ್ಲವಂತೆ. ನಾವು ಹೆಸರಿಗಷ್ಟೇ ಪಾಲಿಕೆ ವ್ಯಾಪ್ತಿಯಲ್ಲಿದ್ದೇವೆ. ಹಾಗಾಗಿ ನಾವು ಪಾಲಿಕೆಯಲ್ಲಿ ಮುಂದುವರಿಯಲ್ಲ. ನಮ್ಮ ಊರಿಗೆ ಪ್ರತ್ಯೇಕ ಗ್ರಾಮ ಪಂಚಾಯತಿ ರಚಿಸಿ ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಇಲ್ಲಿನ ನಿವಾಸಿ ಬಸವರಾಜ ಹಣ್ಣಿಕೇರಿ, ನಮ್ಮ ಊರು ನಗರಪಾಲಿಕೆ ವ್ಯಾಪ್ತಿಗೆ ಸೇರಿ ಸುಮಾರು 40 ವರ್ಷ ಆಯ್ತು. ಹಿಂದೆ ಕಟ್ಟಿದ್ದ ಚರಂಡಿಗಳ ದುರಸ್ತಿ ಕಾರ್ಯವನ್ನು ಮತ್ತೆ ಕೈಗೊಂಡಿಲ್ಲ. ನಿಂತ ನೀರು ಅಲ್ಲಿಯೇ ನಿಲ್ಲುತ್ತದೆಯೇ ಹೊರತು, ಮುಂದೆ ಹೋಗುವಂತಹ ವ್ಯವಸ್ಥೆ ಇಲ್ಲ. ಕಾರ್ಪೋರೇಷನ್ನಿಂದ ಯಾವುದೇ ಕಮಿಷನರ್ ಆಗಲಿ, ಮೇಯರ್ಗಳಾಗಿ ಇಲ್ಲಿಗೆ ಬಂದು ಪರಿಶೀಲನೆ ಮಾಡಿಲ್ಲ. ಖುದ್ದಾಗಿ ಬಂದು ನೀವು ನೋಡಿ, ಪರಿಶೀಲನೆ ಮಾಡಬೇಕು. ಚರಂಡಿಯಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗಿದೆ. ಪಕ್ಕದ ಹಳ್ಳಿಗಳಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಆದರೆ, ನಮ್ಮೂರಲ್ಲಿ ಆಗಿಲ್ಲ. ಇನ್ನು ಗದ್ದೆಗಳಿಗೆ ಹೋಗಲು ಸರಿಯಾದ ರಸ್ತೆ ಇಲ್ಲದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕುಡಿಯುವ ನೀರು 9 ದಿನಕ್ಕೊಮ್ಮೆ ಬಿಡುತ್ತಾರೆ ಎಂದು ದೂರಿದ್ದಾರೆ.
ರಾಜಕುಮಾರ ಪಾಟೀಲ ಎಂಬುವವರು ಮಾತನಾಡಿ, ಬರೀ ಹೆಚ್ಚಿಗೆ ತೆರಿಗೆ ತುಂಬಲು ಮಾತ್ರ ನಾವು ಪಾಲಿಕೆಯಲ್ಲಿ ಇರುವಂತಾಗಿದೆ. ನಾವು ತುಂಬುವ ತೆರಿಗೆ ಪ್ರಕಾರವಾದ್ರೂ ಅಭಿವೃದ್ಧಿ ಆಗಬೇಕಲ್ವೇ..? ಇನ್ಮುಂದೆ ನಾವು ಪಾಲಿಕೆಗೆ ತೆರಿಗೆ ತುಂಬುವುದಿಲ್ಲ. ಈ ಹಿಂದೆ ಇದ್ದಂತೆ ಈಗಲೂ ನಮ್ಮ ಊರಿಗೆ ಪ್ರತ್ಯೇಕ ಗ್ರಾಮ ಪಂಚಾಯತಿ ರಚಿಸಬೇಕು ಎಂದು ಒತ್ತಾಯಿಸಿದರು.
ಮೇಯರ್ ಬರುವುದು ಕೂಡ ಅಷ್ಟಕ್ಕಷ್ಟೇ: ಪಾಲಿಕೆ ಆಯುಕ್ತರು ಅಷ್ಟೇ ಅಲ್ಲ, ಮೇಯರ್ ಕೂಡಾ ಬಸವನಕುಡಚಿಗೆ ಬರುವುದು ಅಪರೂಪ. ಹಿಂದೊಮ್ಮೆ ಕಾರ್ಯಕ್ರಮ ನಿಮಿತ್ತ ಇಲ್ಲಿಗೆ ಬಂದಿದ್ದು ಬಿಟ್ಟರೆ, ಇಲ್ಲಿನ ಸಮಸ್ಯೆ ಆಲಿಸಲು ಬಂದ ಇತಿಹಾಸವೇ ಇಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ನಮ್ಮನ್ನು ಪಾಲಿಕೆಯಿಂದ ಬೇರ್ಪಡಿಸಿ : ಸ್ಮಾರ್ಟ್ ಸಿಟಿ ಯೋಜನೆಯಡಿ 1 ಸಾವಿರ ಕೋಟಿ ರೂಪಾಯಿ ಅನುದಾನ ಬೆಳಗಾವಿಗೆ ಬಂದರೂ ಕೂಡ ಬಸವನಕುಡಚಿ ಅಭಿವೃದ್ಧಿಗೆ ಒತ್ತು ನೀಡಿಲ್ಲ. ಯಾವ ಪುರುಷಾರ್ಥಕ್ಕೆ ನಾವು ಪಾಲಿಕೆಯಲ್ಲಿ ಮುಂದುವರೆಯಬೇಕು. ತಕ್ಷಣ ನಮ್ಮನ್ನು ಪಾಲಿಕೆಯಿಂದ ಬೇರ್ಪಡಿಸಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಸಮಸ್ಯೆಗಳನ್ನು ಪರಿಹರಿಸಲು ಶೀಘ್ರವೇ ಕ್ರಮ: ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ, ಎರಡು ದಿನಗಳಲ್ಲಿ ಬಸವನಕುಡಚಿಗೆ ಭೇಟಿ ನೀಡುತ್ತೇನೆ. ಜನರ ಸಮಸ್ಯೆ ಆಲಿಸಿ, ಶೀಘ್ರವೇ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಮೂಲ ಸೌಕರ್ಯಗಳಿಲ್ಲದೆ ಬೆಳಗಾವಿಯ ಕೆಹೆಚ್ಬಿ ಕಾಲೋನಿ ನಿವಾಸಿಗಳ ಗೋಳು.. ಪಾಲಿಕೆ ಆಯುಕ್ತರಿಂದ ಶೀಘ್ರ ಕ್ರಮದ ಭರವಸೆ