ಬೆಳಗಾವಿ: ಈ ಬಾರಿ ನಮ್ಮ ಪಂಚಮಸಾಲಿ ಸಮಾಜ ಬಹುತೇಕ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿರುವ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮಗೆ ನ್ಯಾಯ ಕೊಡಿಸುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಆದಷ್ಟು ಬೇಗನೆ ಮುಖ್ಯಮಂತ್ರಿಗಳು ಆಡಳಿತಾತ್ಮಕ ಸಭೆ ಕರೆದು ತಮ್ಮ ಜೊತೆ ಮಾತುಕತೆ ನಡೆಸಬೇಕು ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಇಂದು ನಗರದ ಗಾಂಧಿ ಭವನದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ಚಳವಳಿ ಒಂದು ಹಂತಕ್ಕೆ ಬಂದ ವೇಳೆ ಚುನಾವಣೆ ಬಂತು. ಈಗ ಹೊಸ ಸರ್ಕಾರ ಬಂದು ಇಂದಿಗೆ ಒಂದು ತಿಂಗಳಾಯಿತು. ಹೀಗಾಗಿ ಇಂದು ಬೆಳಗ್ಗೆ ಕಾನೂನು ಘಟಕದ ವಕೀಲರ ಜೊತೆಗೆ ಒಂದು ಸಮಾಲೋಚನಾ ಸಭೆ ಮಾಡಿ ಮುಂದಿನ ಹೋರಾಟದ ಕುರಿತು ಚರ್ಚಿಸಿದ್ದೇವೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಹಕ್ಕೊತ್ತಾಯ ಮಂಡಿಸುವ ಬಗ್ಗೆ ಚರ್ಚೆಯಾಗಿದೆ ಎಂದು ವಿವರಿಸಿದರು.
ಗೊಂದಲದಲ್ಲಿ ಸಮುದಾಯದ ವಿದ್ಯಾರ್ಥಿಗಳು: ಪಂಚಮಸಾಲಿ ಮೀಸಲಾತಿ ಹೋರಾಟ ಕಾನೂನು ಮೆಟ್ಟಿಲು ಹತ್ತಿದೆ. ಒಂದು ಕಡೆ ಹೈಕೋರ್ಟ್, ಮತ್ತೊಂದು ಕಡೆ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದೆ. ಇಂದು ನಮ್ಮ ಸಮುದಾಯದ ವಿದ್ಯಾರ್ಥಿಗಳು ಜನಗಣತಿ ಮತ್ತು ಶಾಲಾ ದಾಖಲಾತಿ ಸಂದರ್ಭದಲ್ಲಿ ಉದ್ಯೋಗದ ಸಂದರ್ಭದಲ್ಲಿ ಯಾವುದನ್ನು ಬರೆಸಬೇಕು ಎಂಬ ಗೊಂದಲದಲ್ಲಿದ್ದಾರೆ.
ಈ ಮಾಧ್ಯಮಗೋಷ್ಟಿ ಮೂಲಕ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಹಕ್ಕೊತ್ತಾಯ ಮಂಡಿಸುತ್ತಿದ್ದೇನೆ. ತಾವು ಸಾಮಾಜಿಕ ನ್ಯಾಯದ ಪರವಾಗಿ ಇದ್ದವರು, ನಮ್ಮ ಮೀಸಲಾತಿ ಹೋರಾಟದ ಆಳ ಅಗಲ ಸಮಗ್ರವಾಗಿ ಬಲ್ಲವರು. ಈಗಾಗಲೇ ತಮ್ಮ ಸರ್ಕಾರ ಬಂದ ನಂತರ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳ ಸ್ವಾಮೀಜಿಗಳ ಸಭೆ ಕರೆದು ಚರ್ಚಿಸಿದ್ದೀರಿ. ಅದೇ ರೀತಿ ನಮ್ಮನ್ನು ಕರೆದು ನಮಗೆ ಯಾವ ರೀತಿ ನ್ಯಾಯ ಕೊಡಿಸುತ್ತಿರಿ ಎಂಬುದನ್ನು ಸ್ಪಷ್ಟಪಡಿಸಬೇಕು. ಪಂಚಮಸಾಲಿ ಶಾಸಕರನ್ನೊಳಗೊಂಡ ಹೋರಾಟಗಾರರ ನಿಯೋಗದ ಭೇಟಿಗೆ ಅವಕಾಶ ನೀಡಬೇಕು. ಆಡಳಿತಾತ್ಮಕ ಸಭೆಗೆ ನಮ್ಮನ್ನು ಆಹ್ವಾನಿಸಬೇಕು. ಕಾನೂನಾತ್ಮಕ ಬೆಳವಣಿಗೆಗಳು, ಯಾವ ರೀತಿ ನ್ಯಾಯ ಕೊಡಿಸುತ್ತೀರಿ ಎಂಬುದನ್ನು ತಿಳಿಸಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.
ಸಿಎಂ ಭೇಟಿ ಮಾಡಿ ಮುಂದಿನ ಹೋರಾಟ ನಿರ್ಧಾರ: ತಮ್ಮ ಅವಧಿಯಲ್ಲಿ ಸ್ಪಷ್ಟವಾದ ಮೀಸಲಾತಿ ನೀಡಬೇಕು. ಈವರೆಗೆ ಆಗಿರುವ ಹೋರಾಟ, ಕಾನೂನಾತ್ಮಕ ಬೆಳವಣಿಗೆಗಳು ಅದನ್ನು ತಮ್ಮ ಸರ್ಕಾರದಲ್ಲಿ ಯಾವ ರೀತಿ ಸರಿಪಡಿಸುತ್ತಿರಿ ಎಂಬುದನ್ನು ಸ್ಪಷ್ಟಪಡಿಸಬೇಕು. ಅದೇ ರೀತಿ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಲಿಂಗಾಯತ ಎಲ್ಲ ಒಳ ಪಂಗಡಗಳನ್ನು ಸೇರಿಸುವ ನಿಟ್ಟಿನಲ್ಲಿ ಯಾವ ನಿಲುವು ತೆಗೆದುಕೊಳ್ಳುತ್ತಿರಿ ಎಂಬುದನ್ನು ಸ್ಪಷ್ಟಪಡಿಸಿ ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.
ನಾವು 2ಎ ಕೇಳಿದ್ದೆವು, ಆದರೆ ಕೊನೆಯಲ್ಲಿ ಸರ್ಕಾರ 2ಡಿ ಕೊಟ್ಟಿತ್ತು. ಇದರಲ್ಲಿ ಒಂದು ಹೈಕೋರ್ಟ್ ನಲ್ಲಿದ್ದರೆ, ಮತ್ತೊಂದು ಸುಪ್ರೀಂಕೋರ್ಟ್ ನಲ್ಲಿದೆ. ಹೀಗಾಗಿ ಈಗ ನಾವು 3ಬಿ ಅಲ್ಲೇ ಇದ್ದೇವೆ. 2ಡಿ ವಿಚಾರ ಕೋರ್ಟ್ ನಲ್ಲೇ ಇದೆ. ಆ ಬಗ್ಗೆ ಏನೂ ಮಾತನಾಡುವುದಿಲ್ಲ. ಈ ವಿಚಾರದಲ್ಲಿ ಹೊಸ ಸರ್ಕಾರದ ನಿಲುವು ನಮಗೆ ಗೊತ್ತಾಗಬೇಕಿದೆ. ಆದ್ದರಿಂದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅವರ ನಿಲುವಿನ ಆಧಾರದ ಮೇಲೆ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿದರು.
ಕಾನೂನು ತೊಡಕು ಏನಾದರೂ ಇದ್ದರೆ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಯಾವುದೇ ಸಮಸ್ಯೆ ಇಲ್ಲ. ಅಲ್ಲಿಯಾದರೂ ನಮ್ಮನ್ನು ಸೇರಿಸಬೇಕು. ನಮ್ಮೊದೊಂದು ಅಲ್ಲ ಪಟೇಲ, ಮರಾಠಾ, ಕಾಪೋಲಿ ಮೀಸಲಾತಿ ಹೋರಾಟಗಳು ಇರಬಹುದು ಬಹುತೇಕ ಮೀಸಲಾತಿ ಚಳವಳಿ ವಿಚಾರಗಳು ಕಾನೂನಾತ್ಮಕವಾಗಿ ಬಗೆಹರಿಯುತ್ತವೆ. ಇನ್ನು, ನಮ್ಮ ಕಾನೂನು ಘಟಕದ ಜೊತೆಗೆ ಚರ್ಚಿಸಿ 2ಎ, 2ಡಿ ಬೇಡಿಕೆ ಬಗ್ಗೆ ನಿರ್ಧರಿಸುತ್ತೇವೆ ಎಂದು ಸ್ವಾಮೀಜಿ ಹೇಳಿದರು.
ಸಂಪುಟ ವಿಸ್ತರಣೆಯಲ್ಲಿ ಪಂಚಮಸಾಲಿಗರಿಗೆ ಅನ್ಯಾಯ: ಸಂಪುಟ ವಿಸ್ತರಣೆಯಲ್ಲಿ ಪಂಚಮಸಾಲಿಗರಿಗೆ ಅನ್ಯಾಯ ವಿಚಾರಕ್ಕೆ, ಐವರಿಗೆ ಮಂತ್ರಿ ಸ್ಥಾನ ನೀಡುವಂತೆ ಕೇಳಿದ್ದೆವು. ವಿಜಯಾನಂದ ಕಾಶಪ್ಪನವರ, ವಿನಯ್ ಕುಲಕರ್ಣಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನೀಡುವಂತೆ ನಾವು ಮನವಿ ಮಾಡಿಕೊಂಡಿದ್ದೆವು. ಇದರಲ್ಲಿ ಶಿವಾನಂದ ಪಾಟೀಲ, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನುಳಿದವರಿಗೆ ಅವಕಾಶ ನೀಡುತ್ತೇವೆ ಎಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಭರವಸೆ ಕೊಟ್ಟಿದ್ದಾರೆ ಎಂದರು.
ಪ್ರತ್ಯೇಕ ಲಿಂಗಾಯತ ಧರ್ಮ ಜಾಮದಾರ್ ಹೋರಾಟ: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ, ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಶಿಫಾರಸು ಮಾಡಿದೆ, ಮತ್ತೊಮ್ಮೆ ಶಿಫಾರಸು ಮಾಡಬೇಕು. ಇಡೀ ಲಿಂಗಾಯತ ಸಮುದಾಯಕ್ಕೆ ಇದರಿಂದ ಅನುಕೂಲ ಆಗುತ್ತದೆ. ಆ ನಿಟ್ಟಿನಲ್ಲಿ ಜಾಮದಾರ್ ಅವರು ಸಂಪೂರ್ಣ ಹೋರಾಟ ಮಾಡುತ್ತಿದ್ದಾರೆ ಎಂದು ಕೂಡಲಸಂಗಮ ಶ್ರೀ ತಿಳಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಪಂಚಮಸಾಲಿ ಸಮಾಜದ ಗೌರವ ಜಿಲ್ಲಾಧ್ಯಕ್ಷ ಆರ್.ಕೆ. ಪಾಟೀಲ, ನಗರ ಅಧ್ಯಕ್ಷ ರಾಜು ಮಗದುಮ್ಮ, ನ್ಯಾಯವಾದಿಗಳಾದ ಆರ್.ಸಿ. ಪಾಟೀಲ, ಶಿವಪುತ್ರ ಪಟಕಲ್, ಮುಖಂಡರಾದ ಎಸ್.ಬಿ. ಪಾಟೀಲ, ಸತೀಶ ಬಿರಾದರ ಸೇರಿ ಇನ್ನಿತರರು ಇದ್ದರು.
ಇದನ್ನೂಓದಿ:Textbook Revision : ಹೆಡ್ಗೇವಾರ್, ಸಾವರ್ಕರ್ ಕುರಿತಾದ ಪಾಠ ತೆಗೆಯಲಾಗಿದೆ: ಸಚಿವ ಮಧು ಬಂಗಾರಪ್ಪ