ಬೆಳಗಾವಿ: ನಮ್ಮದು ಆರ್ಎಸ್ಎಸ್ ಹಿನ್ನೆಲೆಯ ಕುಟುಂಬ. ಜನಸಂಘದಿಂದಲೂ ನಮ್ಮ ಕುಟುಂಬ ಸಂಘದೊಂದಿಗೆ ಇದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ತಾಲೂಕಿನ ನಾವಲೆ ಗ್ರಾಮದ ಗಣೇಶ ಭಾಗದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ಪೂರ್ವವೇ ಇದ್ದ ಜನಸಂಘದ ಜೊತೆಗೆ ನಾವಿದ್ದೇವೆ. ಆಗ ನಾವು ದೀಪದ ಚಿತ್ರ ಇದ್ದ ಕರಿ ಟೋಪಿ ಹಾಕುತ್ತಿದ್ದೆವು. ಸಂಘದಲ್ಲಿದ್ದಾಗ ನಮ್ಮ ತಂದೆ ಮೂರು ತಿಂಗಳು ಜೈಲಿನಲ್ಲಿದ್ದರು. ನಾವು ಉದಯವಾಗಿದ್ದು ಜನಸಂಘದಿಂದ. ಹಾಫ್ ಚಡ್ಡಿ ಹಾಕುತ್ತಿದ್ದೇವು. ಆದರೆ ಅನಿವಾರ್ಯವಾಗಿ ಕಾಂಗ್ರೆಸ್ಗೆ ಹೋಗಬೇಕಾಯಿತು. ನನ್ನ ತಂದೆ ಜಗನ್ನಾಥ್ ಜೋಶಿಯವರ ಫಾಲೋವರ್ಸ್ ಆಗಿದ್ದರು. ಗೋವಾ ವಿಮೋಚನೆಗಾಗಿ ಹೋರಾಟ ಮಾಡಿ ಮೂರು ತಿಂಗಳು ಜೈಲಿನಲ್ಲಿದ್ದರು ಎಂದರು.
ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಟಿಕೆಟ್ ಯಾರಿಗೆ ಸಿಗುತ್ತೆ ಗೊತ್ತಿಲ್ಲ. ಆದರೆ ಎಲ್ಲರನ್ನೂ ಕೊಲ್ಲಾಪುರದ ಜ್ಯೋತಿಬಾ ದೇವಸ್ಥಾನಕ್ಕೆ ಕರೆದೊಯ್ಯುತ್ತೇನೆ. ಪಕ್ಷದ ಪರವಾಗಿ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಆಣೆ ಮಾಡಿಸುತ್ತೇನೆ. ಆಗಲೇ ಇಲ್ಲಿ ಬಿಜೆಪಿ ಗೆಲುವು ಸಾಧ್ಯ. 2023ರಲ್ಲಿ ಇಲ್ಲಿ ಭಗವಾ ಧ್ವಜ ಹಾರಿಸುವ ಸಂಕಲ್ಪ ಮಾಡಬೇಕು ಎಂದರು.