ಅಥಣಿ: ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಎಪಿಎಂಸಿವರೆಗೆ ನಿರ್ಮಾಣವಾಗುತ್ತಿರುವ ಒಳಚರಂಡಿ ಕಾಮಗಾರಿಯನ್ನು ಅಧಿಕಾರಿಗಳು ಅವೈಜ್ಞಾನಿಕವಾಗಿ ನಿರ್ಮಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಎಸ್ಪಿ ಜಿಲ್ಲಾಧ್ಯಕ್ಷ ಬಾಹುಸಾಹೇಬ ಕಾಂಬಳೆ ಮಾತನಾಡಿ, ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣ ಮಾಡುತ್ತಿರುವ ಒಳ ಚರಂಡಿ ಅಂಕುಡೊಂಕಾಗಿದೆ. ಇದೇ ವೇಳೆ ಕೆಲವು ವರ್ಷಗಳ ಹಿಂದೆ ನಿರ್ಮಿಸಿರುವ ಅಂಬೇಡ್ಕರ್ ಭವನದ ಕೆಲ ಭಾಗಗಳನ್ನು ಒಡೆದು ಹಾಕಲಾಗುತ್ತಿದೆ. ಈ ಮೂಲಕ ಅಧಿಕಾರಿಗಳು ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸರಳವಾಗಿ ಒಳಚರಂಡಿ ನಿರ್ಮಿಸುವುದನ್ನು ಬಿಟ್ಟು ಈ ರೀತಿಯ ಕಾಮಗಾರಿ ಸಾಕಷ್ಟು ಅನುಮಾನಕ್ಕೆ ಕಾರಣವಾಗುತ್ತದೆ. ಅಂಬೇಡ್ಕರ್ ಭವನಕ್ಕೆ ಯಾವುದೇ ಧಕ್ಕೆ ಮಾಡಿದರೂ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಓದಿ:ರಾಹುಗ್ರಸ್ತ ಸೂರ್ಯಗ್ರಹಣ ಹಿನ್ನೆಲೆ ದಕ್ಷಿಣಕಾಶಿ ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
ಲೋಕೋಪಯೋಗಿ ಇಲಾಖೆ ಅಧಿಕಾರಿ ಜಯಾನಂದ ಹೀರೆಮಠ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಮುಂದಿನ ಯೋಜನೆಗಳಿಗೆ ಯಾವುದೇ ತೊಂದರೆ ಆಗದಂತೆ ಒಳ ಚರಂಡಿ ನಿರ್ಮಾಣ ಮಾಡುತ್ತಿದ್ದೇವೆ. ವಾಸ್ತವ್ಯದ ಮನೆಗಳು ಬಂದಾಗ ಅಲ್ಲಿ ಚರಂಡಿ ಅಂಕುಡೊಂಕಾಗುವುದು ಸಹಜ. ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಒಳ ಚರಂಡಿ ನಿರ್ಮಾಣ ಮಾಡುತ್ತೇವೆ. ಯಾವುದೇ ಹಾನಿಯಾಗದಂತೆ ಕೆಲಸ ನಡೆಯಲಿದೆ ಎಂದರು.