ಬೆಳಗಾವಿ : ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಸ್ವಂತ ಖರ್ಚಿನಲ್ಲಿಯೇ ಹೊಸ ಸಂಪರ್ಕ ಪಡೆಯುವ ಆದೇಶವನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು. ಇದೇ ತಿಂಗಳು 10ರಂದು ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಅದಕ್ಕೂ ಮಣಿಯದಿದ್ದರೆ ಚಳಿಗಾಲ ಅಧಿವೇಶನದ ವೇಳೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಎಚ್ಚರಿಸಿದ್ದಾರೆ.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬರಗಾಲ, ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್‌ನಿಂದ ಕಂಗಾಲದ ರೈತರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿದೆ. ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಪಡೆಯಬೇಕಾದರೇ ಸ್ವಂತ ಖರ್ಚಿನಲ್ಲಿ ಟ್ರಾನ್ಸ್‌ಫಾರ್ಮರ್, ಕಂಬ ಮತ್ತು ತಂತಿ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ರೈತರೇ ಖರೀದಿಸಬೇಕೆಂದು ಆದೇಶ ಹೊರಡಿಸಿದ್ದು ಖಂಡನೀಯ. ಈ ಹಿಂದೆ ಪ್ರತಿ ನೀರಾವರಿ ಪಂಪಸೆಟ್‌ಗಳಿಗೆ ಕೇವಲ 24 ಸಾವಿರ ರೂ. ಶುಲ್ಕ ನಿಗದಿಯಾಗಿತ್ತು. ಸರ್ಕಾರದ ಈ ಆದೇಶದಿಂದ ಕನಿಷ್ಠ 2 ಲಕ್ಷ ರೂಪಾಯಿ ನೀಡಿ ವಿದ್ಯುತ್ ಸಂಪರ್ಕ ಪಡೆಯಬೇಕಾದ ಅನಿವಾರ್ಯತೆಗೆ ರೈತರನ್ನು ನೂಕಲಾಗಿದೆ ಎಂದು ಆರೋಪಿಸಿದರು.
ವಿದ್ಯುತ್ ಅಭಾವ, ರೈತರ ಆತ್ಮಹತ್ಯೆ ಹಾಗೂ ಬರ ಪೀಡಿತ ಪ್ರದೇಶದ ರೈತರ ಸಹಾಯಕ್ಕೆ ಬರಬೇಕಾದ ಸರ್ಕಾರ ಮತ್ತು ಉಸ್ತುವಾರಿ ಮಂತ್ರಿಗಳು ಯಾವುದೇ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ. ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ಅಧಿಕಾರಕ್ಕೆ ಬಂದ ಐದು ತಿಂಗಳಲ್ಲಿ ಯಾರು ಸಿಎಂ ಆಗಬೇಕು. ಎಷ್ಟು ಮಂದಿಯನ್ನು ಹೊಸದಾಗಿ ಡಿಸಿಎಂ ಮಾಡಬೇಕೆಂದಷ್ಟೇ ಚರ್ಚೆ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಅವರು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇನೆ ಎಂದು ಆತಂಕಗೊಂಡಿದ್ದು, ಇದರಿಂದಾಗಿಯೇ ರಾಜ್ಯದ ರೈತರ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ. ನಿಮ್ಮ ರಾಜಕೀಯ ದೊಂಬರಾಟ ನಿಲ್ಲಿಸಿ, ರಾಜ್ಯದ ರಾಜಕೀಯ ಇತಿಹಾಸದಲ್ಲಿ ರೈತ ವಿರೋಧಿ ನಿರ್ಣಯ ಕೈಗೊಂಡ ಸರ್ಕಾರ ಉಳಿದ ಉದಾಹರಣೆ ಇಲ್ಲ ಎಂದು ಈರಣ್ಣ ಕಡಾಡಿ ತಿಳಿಸಿದರು.
ರಾಜ್ಯದಲ್ಲಿ 223 ತಾಲೂಕುಗಳು ಸಂಪೂರ್ಣ ಬರಪೀಡಿತ ಎಂದು ಘೋಷಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ದುರ್ದೈವ ಮತ್ತು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ರಾಜ್ಯದಲ್ಲಿ ಅಳಿದುಳಿದ ಬೆಳೆಗಳನ್ನು ಉಳಿಸಿಕೊಳ್ಳಲಿಕ್ಕೆ ರೈತರು ತೆರೆದ ಬಾವಿ, ಕೊಳವೆ ಬಾವಿಗಳ ಮೊರೆ ಹೋಗಿದ್ದಾರೆ. ಆದರೆ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಕೆಯಾಗದೇ ಅನಿಯಮಿತ ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ರೈತರು ಬಸವಳಿದು ಹೋಗುವಂತಾಗಿದೆ ಎಂದು ಈರಣ್ಣ ಕಡಾಡಿ ಹೇಳಿದರು.
ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಯಾವುದೇ ರೀತಿ ಅನುಕೂಲ ಆಗಿಲ್ಲ. ಶಕ್ತಿ ಯೋಜನೆ ಕೊಟ್ಟ ಬಳಿಕ ಎಷ್ಟು ಬಸ್ ಹೆಚ್ಚಿಸಬೇಕೆಂದು ಯೋಚಿಸಲಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಅಲ್ಲದೇ 200 ಯೂನಿಟ್ ಎಂದು ಹೇಳಿ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಲ್ಲೂ ಮೋಸ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕೊಡುತ್ತಿರುವ ಐದು ಕೆಜಿ ಅಕ್ಕಿ ರಾಜ್ಯ ಸರ್ಕಾರದ್ದು ಎಂದು ಎಂದು ಹೇಳಿಕೊಳ್ಳುತ್ತಿದ್ದಾರೆ. ಯುವನಿಧಿ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ ಎಂದು ಈರಣ್ಣ ಕಡಾಡಿ ವಾಗ್ದಾಳಿ ನಡೆಸಿದರು.
ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬ ವಿಚಾರಕ್ಕೆ ಜಿಲ್ಲೆಗೆ ಅಧ್ಯಕ್ಷರಿದ್ದಾರೆ. ಅವರವರ ಇತಿಮಿತಿಯೊಳಗೆ ನಮ್ಮ ಶಾಸಕರು, ಪದಾಧಿಕಾರಿಗಳು ದಿನನಿತ್ಯ ಹೋರಾಟ ಮಾಡುತ್ತಿದ್ದೇವೆ. ಹಾಗಾಗಿ, ಯಾವುದೂ ಕೆಲಸ ನಿಂತಿಲ್ಲ ಎಂದ ಈರಣ್ಣ ಕಡಾಡಿ, ಜಿಲ್ಲಾ ಬಿಜೆಪಿಯಲ್ಲಿ ಬಣಗಳೇ ಇಲ್ಲ. ಇದು ಕೇವಲ ಮಾಧ್ಯಮಗಳ ಸೃಷ್ಟಿ ಎಂದರು.
ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ : ಇದೇ ತಿಂಗಳು 16, 17ರಂದು ಬೆಳಗಾವಿ ಜಿಲ್ಲೆಗೆ ಪಕ್ಷದ ರಾಜ್ಯ ಬರ ಅಧ್ಯಯನ ತಂಡ ಬರುತ್ತಿದೆ. ಜಿಲ್ಲೆ ಹಾಲಿ, ಮಾಜಿ ಶಾಸಕರು, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಸಂಸದೆ ಮಂಗಳ ಅಂಗಡಿ, ಈರಣ್ಣ ಕಡಾಡಿ, ಶಶಿಕಲಾ ಜೊಲ್ಲೆ, ಪ್ರಭಾಕರ ಕೋರೆ, ರಮೇಶ್ ಕತ್ತಿ, ದುರ್ಯೋಧನ ಐಹೊಳೆ, ಅಭಯ್ ಪಾಟೀಲ, ಹಣಮಂತ ನಿರಾಣಿ ಅವರು ಆಗಮಿಸಲಿದ್ದಾರೆ ಎಂದು ವಿವರಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಅನಿಲ್ ಬೆನಕೆ, ಮುಖಂಡರಾದ ಧನಂಜಯ್ ಜಾಧವ್, ದಾದಾಗೌಡ ಬಿರಾದರ, ಎಫ್.ಎಸ್. ಸಿದ್ದನಗೌಡರ, ರಾಜಶೇಖರ ಡೋಣಿ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ : ಅಕ್ರಮ ಕೃಷಿ ಪಂಪ್ಸೆಟ್ ಸಕ್ರಮ ಯೋಜನೆ ಕೈಬಿಟ್ಟ ಸರ್ಕಾರ: ಬೆಳಗಾವಿ ರೈತರು ಕಂಗಾಲು