ಬೆಳಗಾವಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಹಾಗೂ ಅಮೃತ ಸಿಟಿ ಯೋಜನೆಗಳಿಗೆ ಕುಂದಾನಗರಿ ಬೆಳಗಾವಿ ಆಯ್ಕೆಯಾಗಿದೆ. ಈ ಯೋಜನೆಗಳು ನಗರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ನಗರಕ್ಕೆ 1,000 ಕೋಟಿ, ಅಮೃತ ಸಿಟಿ ಯೋಜನೆಯಡಿ 500 ಕೋಟಿ ರೂ. ಬಿಡುಗಡೆಯಾಗಿದೆ. ಅಲ್ಲದೇ ನಗರೋತ್ಥಾನ ಯೋಜನೆಯಡಿ ಪ್ರತಿ ವರ್ಷ ನಗರಕ್ಕೆ 125 ಕೋಟಿ ರೂ. ಬರುತ್ತಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಂದ ನಗರಕ್ಕೆ ಅನುದಾನ ಹೊಳೆಯಂತೆ ಹರಿದು ಬರರ್ತಿದೆಯಾದ್ರೂ ಕೂಡ ಬೆಳಗಾವಿ ನಗರದ ಅರ್ಧ ಭಾಗ ಪ್ರದೇಶ ಒಳಚರಂಡಿ ವ್ಯವಸ್ಥೆಯಿಲ್ಲದೇ ಬಳಲುತ್ತಿದೆ.
ಗ್ರಾಮೀಣ ಪ್ರದೇಶಗಳ ಜೊತೆಗೆ ನಗರ ಪ್ರದೇಶದ ಸ್ವಚ್ಛತೆಯು ಆ ಭಾಗದ ಅಭಿವೃದ್ಧಿಯನ್ನು ಎತ್ತಿ ಹಿಡಿಯುತ್ತದೆ. ಹಾಗಾಗಿ ಸೂಕ್ತ ಒಳಚರಂಡಿ ವ್ಯವಸ್ಥೆ ಜೊತೆಗೆ ಚರಂಡಿ, ತಾಜ್ಯ ವಿಲೇವಾರಿ ವ್ಯವಸ್ಥೆ ಇರಬೇಕು. ಆದ್ರೆ ಅದೆಷ್ಟೋ ಕಡೆಗಳಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆಯೇ ಇರುವುದಿಲ್ಲ. ಅಲ್ಲಲ್ಲಿ ಕೊಳಚೆ ನಿಂತು ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತದೆ.
ಬೆಳಗಾವಿಯು ಉತ್ತರ ಕರ್ನಾಟಕ ಭಾಗದಲ್ಲೇ ಅತೀ ವೇಗವಾಗಿ ಬೆಳೆಯುತ್ತಿರುವ ನಗರ. ದಿನದಿಂದ ದಿನಕ್ಕೆ ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ನಗರವೂ ಬೆಳೆಯುತ್ತಿದೆ. ಸರ್ಕಾರ ಹಾಗೂ ಖಾಸಗಿ ವ್ಯಕ್ತಿಗಳಿಂದ ನಗರದಲ್ಲಿ ಹೊಸ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿಯೋ, ಒಳಚರಂಡಿಯ ಅಗತ್ಯತೆ ಬಗ್ಗೆ ಜನರಲ್ಲಿನ ಜಾಗೃತಿ ಕೊರತೆಯಿಂದಲೋ ಏನೋ, ಅರ್ಧಕ್ಕೆ ಅರ್ಧ ನಗರದಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆಯೇ ಇಲ್ಲ.
ಕೊಳಚೆ ಮೇಲೆಯೇ ಸಂಚಾರ:
ಪ್ರತಿ ಬಡಾವಣೆ ಜನರಿಗೆ ಕುಡಿಯುವ ನೀರು ಹಾಗೂ ವಿದ್ಯುತ್ ಅಭಾವ ಎದುರಾದರೆ ಪ್ರತಿಭಟನೆ ನಡೆಸುತ್ತಾರೆ. ಆದರೆ ಅಗತ್ಯವಾಗಿ ಇರಲೇಬೇಕಾದ ಒಳಚರಂಡಿ ವ್ಯವಸ್ಥೆ ಇರದಿದ್ದರೂ ಕೂಡ ನಗರವಾಸಿಗಳು ದೊಡ್ಡ ಪ್ರಮಾಣದಲ್ಲಿ ಧ್ವನಿ ಎತ್ತುತ್ತಿಲ್ಲ. ಪರಿಣಾಮ ಒಳಚರಂಡಿ ಸೇರಬೇಕಿದ್ದ ಕೊಳಚೆ ನೀರು ಇದೀಗ ರಸ್ತೆ ಮೇಲೆ ಹರಿದಾಡುತ್ತಿದೆ. ಜನರು ಕೂಡ ಕೊಳಚೆ ಮೇಲೆಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೆ ಮೂಗುದಾರ ಹಾಕುವವರು ಯಾರು?
ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರದಿಂದ ನಗರದಲ್ಲಿ ಬಡಾವಣೆಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲದೇ ಖಾಸಗಿ ವ್ಯಕ್ತಿಗಳು ಕೂಡ ಲೇಔಟ್ ನಿರ್ಮಿಸುತ್ತಿದ್ದಾರೆ. ಆದ್ರೆ ಬುಡಾದಿಂದ ಅಭಿವೃದ್ಧಿಗೊಳ್ಳುವ ಬಡಾವಣೆಗಳಿಗೂ ಕೂಡ ಒಳಚರಂಡಿ ನಿರ್ಮಾಣ ಮಾಡುತ್ತಿಲ್ಲ. ಇನ್ನು ಖಾಸಗಿ ವ್ಯಕ್ತಿಗಳು ಕೂಡ ಒಳಚರಂಡಿ ನಿರ್ಮಿಸದೇ ನಿವೇಶನ ಮಾರಾಟ ಮಾಡುತ್ತಾರೆ.
ಇದನ್ನೂ ಓದಿ: ಒಳಚರಂಡಿ ಸ್ವಚ್ಛತೆಗಾಗಿ ಸಾಂಸ್ಕೃತಿಕ ನಗರಿಗೆ ಬಂತು ರೋಬೋಟ್ ಯಂತ್ರ!
ಇತ್ತ ಒಳಚರಂಡಿ ಇಲ್ಲದೇ ಬಡಾವಣೆ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟವಾಗಿ ಹೇಳುತ್ತಿಲ್ಲ. ಖಾಸಗಿ ವ್ಯಕ್ತಿಗಳು, ರಾಜ್ಯ ಸರ್ಕಾರದ ಭಾಗವಾಗಿರುವ ಬುಡಾ ಕೂಡ ತನ್ನ ಬಡಾವಣೆಯಲ್ಲಿ ಒಳಚರಂಡಿ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಒಳಚರಂಡಿ ಇರದೇ ಹೋದರೆ ನೈರ್ಮಲ್ಯ ಕಾಪಾಡುವುದು ಕೂಡ ಕಷ್ಟವಾಗುತ್ತದೆ. ಈ ಮಾಹಿತಿ ಗೊತ್ತಿದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗಾಗಿ, ಇನ್ನುಮುಂದೆಯಾದರೂ ಹೊಸದಾಗಿ ನಿರ್ಮಾಣಗೊಳ್ಳುವ ಬಡಾವಣೆಗಾದರೂ ಒಳಚರಂಡಿ ನಿರ್ಮಾಣ ಕಡ್ಡಾಯ ಮಾಡಬೇಕು. ಆರಂಭಿಕ ಹಂತದಲ್ಲಿ ಇದಕ್ಕೆ ಮೂಗುದಾರ ಹಾಕದಿದ್ರೆ ಬೆಳಗಾವಿ ಜನರು ಭವಿಷ್ಯದಲ್ಲಿ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ.