ಬೆಳಗಾವಿ: ಗೃಹಲಕ್ಷ್ಮಿ ಯೋಜನೆಯ ನೋಂದಾಯಿತ ಫಲಾನುಭವಿಗಳ ಬ್ಯಾಂಕ್ ಖಾತೆಗೆ 2 ಸಾವಿರ ರೂ ಜಮೆ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಹೊಸ ನೋಂದಣಿ ಪ್ರಕ್ರಿಯೆ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಎಲ್ಲಾ ಫಲಾನುಭವಿಗಳಿಗೆ ಹಣ ಜಮೆಯಾದ ಬಳಿಕ ಮತ್ತೆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಮಂಗಳವಾರ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಫಲಾನುಭವಿಗಳ ಬ್ಯಾಂಕ್ ಖಾತೆ ಬಂದ್ ಆಗಿದ್ದರಿಂದ 7 ರಿಂದ 8 ಲಕ್ಷ ಫಲಾನುಭವಿಗಳಿಗೆ ಹಣ ಜಮೆಗೊಳಿಸಲು ತೊಂದರೆಯಾಗಿದ್ದು, ಶೀಘ್ರವೇ ಅದನ್ನು ಸರಿಪಡಿಸುತ್ತೇವೆ. ಖಜಾನೆಗೆ ಹಣ ಬಿಡುಗಡೆಗೊಳಿಸಲಾಗಿದ್ದು, ಸುಮಾರು 1 ಕೋಟಿ ಫಲಾನುಭವಿಗಳಿಗೆ 2 ರಿಂದ 3 ದಿನಗಳಲ್ಲಿ ಹಣ ಜಮೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂಡಿಯಾ ಬದಲು ಭಾರತ ಎಂದು ಮರುನಾಮಕರಣಕ್ಕೆ ಕೇಂದ್ರದ ಚಿಂತನೆ ವಿಚಾರಕ್ಕೆ ಪ್ರತಿಕ್ರಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಜಾಗತಿಕ ಮಟ್ಟದಲ್ಲಿ ಭಾರತ ದೇಶಕ್ಕೆ ಇಂಡಿಯಾ ಎಂದು ಕರೆಯುವುದು ರೂಢಿ. ರಾಷ್ಟ್ರಪತಿಗಳ ಈ ತೀರ್ಮಾನಕ್ಕೆ ನಮ್ಮ ನಾಯಕರು ಯಾವ ನಿಲುವು ತೆಗೆದುಕೊಳ್ಳಲಿದ್ದಾರೆಂದು ಕಾದು ನೋಡಬೇಕು. ನಾವು ರಾಜ್ಯಮಟ್ಟದ ನಾಯಕರು. ಹಾಗಾಗಿ, ರಾಷ್ಟ್ರೀಯ ನಾಯಕರು ಏನು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ನೋಡೋಣ ಎಂದರು.
ಸತೀಶ್ ಜಾರಕಿಹೊಳಿ ನಿಮ್ಮ ಮಧ್ಯೆ ಕೋಲ್ಡ್ ವಾರ್ ಇದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಈ ಚರ್ಚೆ ನೋಡಿ ನನಗೆ ವಿಚಿತ್ರ ಎನಿಸುತ್ತಿದೆ. ಕೋಲ್ಡ್ ವಾರ್, ಹಾಟ್ ವಾರ್ ಎಂದರೇನು ಎಂದು ಮಾಧ್ಯಮಗಳಿಗೆ ಮರು ಪ್ರಶ್ನಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ನನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ. 36 ಸಾವಿರ ಕೋಟಿ ಹಣ ಮಹಿಳೆಯರಿಗೆ ಕೊಡಬೇಕು. ಬಹಳಷ್ಟು ಅಳೆದು- ತೂಗಿ ನಾನು ಸಚಿವೆ ಆಗಿ ಹೆಜ್ಜೆ ಇಡುತ್ತಿರುವೆ. ಅಲ್ಲದೇ ಉಡುಪಿ ಜಿಲ್ಲೆ ಕೂಡ ರಾಜ್ಯದಲ್ಲಿ ಸದಾ ಹಾಟ್ ಇರುವ ಜಿಲ್ಲೆ. ಬಿಟ್ಟು ಬಿಡದೇ ಕೆಲಸ ಮಾಡುತ್ತಿದ್ದು, ನನಗೆ ಅಲ್ಲಿ ಪುರುಸೊತ್ತೂ ಸಿಗುತ್ತಿಲ್ಲ. ಈ ಕೋಲ್ಡ್ ವಾರ್- ಹಾಟ್ ವಾರ್ ನನಗೇನೂ ಗೊತ್ತಿಲ್ಲ. ಬೇಕಾದರೆ ನೀವು ಸತೀಶ ಜಾರಕಿಹೊಳಿ ಅವರನ್ನೇ ಒಮ್ಮೆ ಕೇಳಿ. ಅವರು ಸಿಕ್ಕಾಗ ನಾವು ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡುತ್ತೇವೆ ಎಂದರು.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮೃಣಾಲ್ ಹೆಬ್ಬಾಳ್ಕರ ಸ್ಪರ್ಧಿಸಲಿದ್ದಾರೆಯೇ ಎಂಬ ಪ್ರಶ್ನೆಗೆ, ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ಪಕ್ಷದ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಇನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಾನು ಭಾಗವಹಿಸಲು ಆಗದ ಹಲವು ಕಾರ್ಯಕ್ರಮಗಳಲ್ಲಿ ಮೃಣಾಲ್ ಭಾಗವಹಿಸಿರಬಹುದು. ಇದಕ್ಕೆ ಲೋಕಸಭೆ ಚುನಾವಣೆ ತಯಾರಿ ಎನ್ನುವುದು ಸರಿಯಲ್ಲ. ಸವದತ್ತಿಯಲ್ಲಿ ನಮ್ಮ ಸಕ್ಕರೆ ಕಾರ್ಖಾನೆ ಇದೆ. ಗ್ರಾಮೀಣ ಕ್ಷೇತ್ರದಲ್ಲಿ ಆತ ಮೊದಲಿನಿಂದಲೂ ಓಡಾಡುತ್ತಿದ್ದಾನೆ. ಖಾನಾಪುರದಲ್ಲಿ ಅಜ್ಜನ ಮನೆ ಇರುವ ಕಾರಣಕ್ಕೆ ಅಲ್ಲಿಗೆ ಆಗಾಗ ಹೋಗುತ್ತಾನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸಮರ್ಥಿಸಿಕೊಂಡರು.
ಸತೀಶ ಜಾರಕಿಹೊಳಿ ಜೊತೆ ಮಿಸಂಡರ್ಸ್ಟ್ಯಾಡಿಂಗ್ ಆಗೋಕೆ ಬಿಡಲ್ಲ: ಜಿಲ್ಲೆಯಲ್ಲಿ 11 ಸ್ಥಾನ ಗೆಲ್ಲಲು, ಪರಿಷತ್ ಚುನಾವಣೆಯಲ್ಲಿ ಎರಡು ಸ್ಥಾನ ಗೆಲ್ಲಲು ಒಗ್ಗಟ್ಟು ಕಾರಣ. ನಮ್ಮ ಮಧ್ಯೆ ಯಾವುದೇ ವಾರ್ ಇಲ್ಲ, ನಮ್ಮದು ಬಿಜೆಪಿ ವಿರುದ್ಧ ಹೋರಾಟ. ಸತೀಶ ಜಾರಕಿಹೊಳಿ ಅವರು ಕೂಡ ಎಂದೂ ನನ್ನ ಜೊತೆಗೆ ಕೋಲ್ಡ್ ವಾರ್ ಇದೆ ಎಂದು ಹೇಳಿಲ್ಲ, ನಾನೂ ಕೇಳಿಲ್ಲ. ನನ್ನ ಸತೀಶ ಮಧ್ಯೆ ಪಕ್ಷ ಸಂಘಟನೆ, ಲೋಕಸಭಾ ಚುನಾವಣೆ ಗೆಲುವಿನ ಗುರಿ ಇದೆ. ನನ್ನ ಹಾಗೂ ಸತೀಶ ಮಧ್ಯೆ ಮಿಸ್ ಅಂಡರ್ಸ್ಟ್ಯಾಡಿಂಗ್ ಇಲ್ಲ, ಆಗೋಕು ಬಿಡುವುದಿಲ್ಲ. ಜಿಲ್ಲೆಯಲ್ಲಿ ಸತೀಶ ಜಾರಕಿಹೊಳಿ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಇದನ್ನೂ ಓದಿ: ರಕ್ಷಾ ಬಂಧನದ ಉಡುಗೊರೆಯಾಗಿ ಸರ್ಕಾರ ಗೃಹ ಲಕ್ಷ್ಮಿ ಯೋಜನೆ ಜಾರಿ ಮಾಡಿದೆ: ಸಚಿವ ಮಧು ಬಂಗಾರಪ್ಪ