ಬೆಳಗಾವಿ: ಕೆಂಪು ಮಿಶ್ರಿತ ನೀರಿನ ಬಾಟಲ್ ಇಟ್ಟು ನಾಯಿಗಳ ಉಪಟಳ ತಪ್ಪಿಸುವ ಹೊಸ ಮಾರ್ಗವನ್ನು ಕುಂದಾನಗರಿ ಜನತೆ ಕಂಡುಕೊಂಡಿದ್ದಾರೆ.
ಸದಾಶಿವ ನಗರ, ಶಿವಾಜಿ ನಗರ, ವಡಗಾವಿ, ಖಾಸಬಾಗ, ಕುವೆಂಪು ನಗರ, ಹನುಮಾನ ನಗರ ಸೇರಿದಂತೆ ಮಹಾನಗರದ ಬಹುತೇಕ ಮನೆಗಳು, ಅಂಗಡಿಗಳು ಹಾಗೂ ಕಚೇರಿಗಳ ಮುಂದೆ ನಾಯಿಗಳ ಉಪಟಳ ತಡೆಯಲು ಅರಿಶಿಣ ಹಾಗೂ ಕುಂಕುಮ ಮಿಶ್ರಿತ ನೀರನ್ನು ಇಡಲಾಗುತ್ತಿದೆ. ಇದರಿಂದಾಗಿ ಮನೆ ಹಾಗೂ ಕಚೇರಿಯ ಅಂಗಳದಲ್ಲಿ ನಾಯಿಗಳು ಗಲೀಜು ಮಾಡುವುದನ್ನು ನಿಲ್ಲಿಸುತ್ತಿದ್ದು, ಮನೆಯ ಅಂಗಳ ಶುಚಿಯಾಗಿದೆ ಎನ್ನುತ್ತಿದ್ದಾರೆ ಸಾರ್ವಜನಿಕರು.
ಇನ್ನು ಮಹಾನಗರದಲ್ಲಿ ಸಾರ್ವಜನಿಕರು ಮನೆಯಂಗಳದಲ್ಲಿ ಇಡುವ ಕೆಂಪು ಮಿಶ್ರಿತ ನೀರನ್ನು ಕಂಡ ನಾಯಿಗಳು ಪೆಟ್ರೋಲ್ ಎಂದುಕೊಂಡು ಹೆದರಿ ಓಡಿ ಹೋಗುತ್ತಿವೆ. ಈ ಬಣ್ಣದ ಬಾಟಲ್ನಲ್ಲಿನ ನೀರನ್ನು ನೋಡಿದ ನಾಯಿಗಳು ಗಲೀಜು ಮಾಡೋದಿಲ್ಲ ಎಂಬ ನಂಬಿಕೆಯೊಂದಿಗೆ ಜಿಲ್ಲೆಯ ಜನರು ಮನೆಯಂಗಳದ ಗೇಟ್ಗೆ ಕೆಂಪು ಬಣ್ಣದ ನೀರಿನ ಬಾಟಲ್ಗಳನ್ನು ತುಂಬಿಸಿ ಇಡುತ್ತಿದ್ದಾರೆ. ಬಣ್ಣದ ನೀರನ್ನು ತುಂಬಿಸಿ ಇಟ್ಟಮೇಲೆ ಮನೆ ಅಂಗಣ ಶುಚಿಯಾಗಿದೆ ಎಂದು ಸದಾಶಿವ ನಗರದ ಲಕ್ಷ್ಮಣ ಎಂಬುವವರ ಅಭಿಪ್ರಾಯವಾಗಿದೆ.
ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬಂದ ಬಣ್ಣದ ಬಾಟಲ್:
ಈ ಮೊದಲು ಗ್ರಾಮೀಣ ಪ್ರದೇಶಗಳಲ್ಲಿ ನೊಣಗಳು, ಹೆಗ್ಗಣ ಹಾಗೂ ಇಲಿಗಳ ಕಾಟ ತಪ್ಪಿಸಲು ನೀರಿನ ಬಾಟಲಿಗಳಲ್ಲಿ ಕುಂಕುಮ ಮಿಶ್ರಿತ ಬಣ್ಣದ ನೀರನ್ನು ಹಾಕಿ ಮನೆಯ ಮುಂದೆ ಇಡಲಾಗುತ್ತಿತ್ತು ಎನ್ನಲಾಗ್ತಿದೆ. ಆದ್ರೀಗ ಕಳೆದೊಂದು ವರ್ಷದಿಂದ ಹುಟ್ಟಿಕೊಂಡ ಕೆಂಪು ಬಾಟಲ್ ಮಿಶ್ರಿತ ನೀರು ನಗರದೆಲ್ಲೆಡೆ ಹಬ್ಬಿದೆ. ಇನ್ನು ನಗರ ಪ್ರದೇಶದಲ್ಲಿ ನಾಯಿಗಳ ಹಾವಳಿ ಹೆಚ್ಚಾದ ಪರಿಣಾಮ, ಅವುಗಳು ಎಲ್ಲೆಂದರಲ್ಲಿ ಹೇಸಿಗೆ ಮಾಡುವುದನ್ನು ತಪ್ಪಿಸಲೂ ಈ ಮಾರ್ಗೋಪಾಯವನ್ನು ಜನರು ಕಂಡುಕೊಂಡಿದ್ದಾರೆ. ಇದನ್ನು ಕಂಡ ಜನರು ಮಾಹಿತಿ ಪಡೆದುಕೊಂಡು ತಮ್ಮ ಊರು ಕೇರಿಗಳಲ್ಲಿಯೂ ಇದೇ ಪ್ರಯೋಗವನ್ನು ಮಾಡುತ್ತಿದ್ದಾರೆ.
ಹೀಗೆ ಕುಂಕುಮ ಮಿಶ್ರಿತ ನೀರಿನ ಬಣ್ಣದ ಬಾಟಲ್ ನೀರನ್ನು ಮನೆಯಂಗಳದಲ್ಲಿ ಇಟ್ಟರೆ, ಅದನ್ನು ನೋಡಿ ನಾಯಿಗಳು ಓಡಿ ಹೋಗುತ್ತವೆ ಎಂಬುವುದಕ್ಕೆ ವೈಜ್ಞಾನಿಕವಾಗಿ ಯಾವುದೇ ಪುರಾವೆಗಳಿಲ್ಲ ಎನ್ನುತ್ತಾರೆ ಪಶುವೈದ್ಯ ಡಾ. ಶಶಿಧರ ನಾಡಗೌಡ.