ಚಿಕ್ಕೋಡಿ: ಲೋಕಸಭೆ ಮಹಾಸಮರಕ್ಕೆ ಮುಹೂರ್ತ ಫಿಕ್ಸ್ ಆಗಿದ್ದಾಯ್ತು. ಇನ್ನೇನಿದ್ರೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಎಲ್ಲ ಪಕ್ಷಗಳು ಫುಲ್ ಬ್ಯುಸಿಯಾಗಿವೆ. ಅಧಿಕಾರದಲ್ಲಿರುವ ಬಿಜೆಪಿ, ಅಧಿಕಾರದ ಚುಕ್ಕಾಣಿಯನ್ನು ತನ್ನ ಬಳಯೇ ಉಳಿಸಿಕೊಳ್ಳಲು ತಂತ್ರ ರೂಪಿಸುತ್ತಿದೆ. ಇತ್ತ ದೋಸ್ತಿ ಟೀಂ ಹಲವಾರು ಗೊಂದಲಗಳ ಮಧ್ಯೆಯೇ ಮೈತ್ರಿಯಾಗಿ ಚುನಾವಣೆ ಎದರಿಸಲು ಪ್ರತಿತಂತ್ರ ಹೆಣೆಯುತ್ತಿದೆ. ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಸಹ ಬೆಳೆದಿದೆ. ಅಲ್ಲದೇ ಸಂಭಾವ್ಯರ ಪಟ್ಟಿ ಕೂಡ ತಯಾರಾಗುತ್ತಿದೆ.
ಹೌದು, ಚಿಕ್ಕೋಡಿ ಒಟ್ಟು 8 ಲೋಕಸಭಾ ಮತ ಕ್ಷೇತ್ರಗಳನ್ನು ಹೊಂದಿದೆ. ಕಮಲ ಪಾಳಯದಲ್ಲಿ ಪ್ರಮುಖವಾಗಿ 4 ಅಭ್ಯರ್ಥಿಗಳು ಹಾಗೂ ಕೈ ಪಾಳಯದಲ್ಲಿ ಇಬ್ಬರು ಅಭ್ಯರ್ಥಿಗಳ ಹೆಸರು ಕೇಳಿಬರುತ್ತಿದೆ. ಬಿಜೆಪಿಯಿಂದ ಪ್ರಮುಖವಾಗಿ ಅಣ್ಣಾಸಾಬ ಜೊಲ್ಲೆ, ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಶಾಸಕ ಲಕ್ಷ್ಮಣ ಸವದಿ ಹಾಗೂ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೆಸರು ಸದ್ದು ಮಾಡ್ತಿವೆ. ಕಾಂಗ್ರೆಸ್ನಿಂದ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ‌್ ಹೆಸರು ಕೇಳಿ ಬರುತ್ತಿವೆ.
ಅಲ್ಲದೆ 10 ವರ್ಷಕ್ಕಿಂತ ಹೆಚ್ಚು ಕಾಲ ರಾಜ್ಯಸಭಾ ಸದಸ್ಯರಾಗಿರುವ ಪ್ರಭಾಕರ ಕೋರೆ ಈ ಬಾರಿ ಮೋದಿ ಅಲೆಯಲ್ಲಿ ಸಂಸತ್ ಪ್ರವೇಶಿಸಲು ಚಿಕ್ಕೋಡಿ ಕ್ಷೇತ್ರದಿಂದ ಬಿಜೆಪಿಗೆ ಟಿಕೆಟ್ ಕೇಳಿದ್ದಾರೆ ಎಂಬ ಸುದ್ದಿ ಕುಡ ಹರಿದಾಡ್ತಿದೆ. ಇದರಿಂದ ಈ ಹಿಂದಿನ ಅಭ್ಯರ್ಥಿ ಮಾಜಿ ಸಂಸದ ರಮೇಶ ಕತ್ತಿಗೆ ಇದು ಪೈಪೋಟಿ ತಂದಿದೆ. ಶಾಸಕಿ ಶಶಿಕಲಾ ಜೊಲ್ಲೆ ಪತಿ ಅಣ್ಣಾಸಾಬ ಜೊಲ್ಲೆ ಕೂಡಾ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಸದ ಪ್ರಕಾಶ ಹುಕ್ಕೇರಿ ಮಗ ಗಣೇಶ ಹುಕ್ಕೇರಿ ಅವರ ವಿರುದ್ಧ ಚಿಕ್ಕೋಡಿ-ಸದಲಗಾ ಮತಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಆದರೆ ಈ ಸೋಲನ್ನು ಸವಾಲಾಗಿ ತೆಗೆದುಕೊಂಡು ತಂದೆ ಪ್ರಕಾಶ ಹುಕ್ಕೇರಿಯವರನ್ನು ಸೋಲಿಸಲು ಅಣ್ಣಾಸಾಬ ಜೊಲ್ಲೆ ಪಣತೊಟ್ಟಿದ್ದಾರಂತೆ. ಇವರು ಕೂಡಾ ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಾಜಿ ಸಂಸದ ರಮೇಶ ಕತ್ತಿ ಕೂಡಾ ಕಳೆದ ಚುನಾವಣೆಯ ಸೇಡನ್ನು ತೀರಿಸಿಕೊಳ್ಳಲು ಶಪಥ ಮಾಡಿದ್ದಾರಂತೆ. ಇವರು ಸಹ ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಪಟ್ಟಿಯಲ್ಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಮಾಜಿ ಶಾಸಕ ಲಕ್ಷ್ಮಣ ಸವದಿ ಇದೀಗ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಅಂಶ ಸಹ ಕೇಳಿ ಬರುತ್ತಿದೆ.
ವೈರಿಗಳಾದ ಒಂದೇ ಪಕ್ಷದ ನಾಯಕರು:
ಮಾಜಿ ಸಂಸದ ರಮೇಶ ಕತ್ತಿ ಹಾಗೂ ಮಾಜಿ ಶಾಸಕ ಲಕ್ಷ್ಮಣ ಸವದಿ ಒಂದೇ ಪಕ್ಷದಲ್ಲಿದ್ದರೂ ಸ್ಥಳೀಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ವೈರಿಗಳಾಗಿದ್ದರು. ಅದರಂತೇ ಅಥಣಿ ಕ್ಷೇತ್ರದಲ್ಲಿ ಲಕ್ಷಣ ಸವದಿ ಸೋಲಲು ರಮೇಶ ಕತ್ತಿ ಕಾರಣ ಹಾಗೂ ಚಿಕ್ಕೋಡಿ ಲೋಕಸಭೆ ಚುನಾವಣೆಯಲ್ಲಿ ರಮೇಶ ಕತ್ತಿ ಸೋಲಲು ಲಕ್ಷಣ ಸವದಿ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆಯಂತೆ. ಒಟ್ಟಾರೆ ಇವರಿಬ್ಬರಲ್ಲಿ ಯಾರಿಗೆ ಬಿಜೆಪಿಯಿಂದ ಟಿಕೆಟ್ ಸಿಗುತ್ತದೆ ಎಂಬುದು ಸ್ಥಳೀಯ ಮತದಾರರಲ್ಲಿ ಕುತೂಹಲ ಕೆರಳಿಸಿದೆ.
ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಚಿಕ್ಕೋಡಿಯಲ್ಲಿ ಗೆಲ್ಲುವುದು ಕಠಿಣ ಎನ್ನುವ ಕಾರಣಕ್ಕೆ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ ಎಂಬುವುದು ರಾಜಕೀಯ ಲೆಕ್ಕಾಚಾರ. ಅದಕ್ಕಾಗಿಯೇ ಹಲವಾರು ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದಿದ್ದರೆ ಚಿಕ್ಕೋಡಿ ಲೋಕಸಭಾ ಚುನಾವಣೆ ಸ್ಪರ್ಧಿಸಲಿದ್ದಾರಂತೆ ಹಾಗೂ ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ಅವರ ಹೆಸರು ಕೂಡಾ ಕಾಂಗ್ರೆಸ್ ಅಭ್ಯರ್ಥಿ ಎಂದು ಕೇಳಿ ಬರುತ್ತಿದೆ.
ಒಟ್ಟಾರೆ ಯಾರು ಲೋಕಸಭಾ ಚುನಾವಣೆಗೆ ಚಿಕ್ಕೋಡಿ ಕ್ಷೇತ್ರದಿಂದ ಅಖಾಡಕ್ಕಿಳಿಯುತ್ತಾರೆ ಮತ್ತು ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುದು ಮಾತ್ರ ಕಾದು ನೋಡಬೇಕಿದೆ.