ಬೆಳಗಾವಿ: ಜಿಲ್ಲೆಯಲ್ಲಿ ಎಂಇಎಸ್ ಪುಂಡರ ದಬ್ಬಾಳಿಕೆಯನ್ನ ಖಂಡಿಸಿ ಡಿಸೆಂಬರ್ 31ರಂದು ಕರ್ನಾಟಕ ಬಂದ್ ಮಾಡಲು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸುಮಾರು 35 ಸಂಘಟನೆಗಳು ಬಂದ್‌ಗೆ ಕರೆ ಕೊಟ್ಟಿವೆ.
ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಕರ್ನಾಟಕ ಬಂದ್ ಮಾಡಲು ಕರೆ ಕೊಟ್ಟಿವೆ. ಈ ಬಂದ್‌ಗೆ ಲಾರಿ ಮಾಲೀಕರ ಸಂಘ, ಆಟೋ ಚಾಲಕರು, ಟ್ಯಾಕ್ಸಿ ಮಾಲೀಕರು, ಹೋಟೆಲ್ ಮಾಲೀಕರು ನೈತಿಕ ಬೆಂಬಲವನ್ನ ವ್ಯಕ್ತಪಡಿಸಿದ್ದಾರೆ. ಇನ್ನು ಕನ್ನಡ ಚಿತ್ರೋದ್ಯಮದಿಂದ ಕೂಡ ಕರ್ನಾಟಕ ಬಂದ್‌ಗೆ, ನೈತಿಕ ಬೆಂಬಲ ಸೂಚಿಸಿದೆ.
ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿರುವ ಗುಬ್ಬಿ ಜಯರಾಜ್ ನೇತೃತ್ವದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಈ ಸಭೆಯಲ್ಲಿ ವಿವಿಧ ಅಂಗಸಂಸ್ಥೆಗಳು ಭಾಗಿಯಾಗಿದ್ದವು. ವರ್ಷದ ಕೊನೆಯ ದಿನದೊಂದು ಕರ್ನಾಟಕ ಬಂದ್ ಮಾಡುವುದರಿಂದ ಸಿನಿಮಾ ರಂಗದ ಚಟುವಟಿಕೆಗಳಾದ ಸಿನಿಮಾ, ಶೂಟಿಂಗ್, ಚಿತ್ರಪ್ರದರ್ಶನ ಹಾಗೂ ಬಿಡುಗಡೆಗೆ ರೆಡಿಯಾಗಿರುವ ಸಿನಿಮಾಗಳ ಮೇಲೆ ದೊಡ್ಡ ಮಟ್ಟದ ನಷ್ಟ ಆಗುತ್ತೆ ಅಂತಾ ಫಿಲ್ಮ್ ಚೇಂಬರ್ನಲ್ಲಿ ನಡೆದ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.
ಕನ್ನಡಪರವಾಗಿ ನಮ್ಮ ಬೆಂಬಲ ಸದಾ ಇರುತ್ತದೆ. ಹೀಗಾಗಿ, ಸಾಂಕೇತಿಕ ಬೆಂಬಲ ನೀಡುತ್ತೇವೆ. ಆದರೆ, ಸಂಪೂರ್ಣವಾಗಿ ಬೆಂಬಲ ನೀಡುವುದಿಲ್ಲ ಅಂತಾ ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜಯರಾಜ್ ತೀರ್ಮಾನ ಮಾಡಿದ್ದಾರೆ. ಏಕೆಂದರೆ ಅಂದು ಹಲವಾರು ಸಿನಿಮಾಗಳು ಬಿಡುಗಡೆ ಆಗಲಿದ್ದು, ಬಿಡುಗಡೆ ಆಗಿರುವ ಸಿನಿಮಾಗಳ ಮೇಲೆ ಎಫೆಕ್ಟ್ ಆಗಲಿದೆ ಅಂತಾ ತಿಳಿಸಿದ್ದಾರೆ.
ಓದಿ: ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ: ಬಸವರಾಜ ಬೊಮ್ಮಾಯಿ