ಬೆಳಗಾವಿ: ಸಿಎಂ ಬದಲಾವಣೆಗೆ ಸಂಬಂಧಿಸಿದಂತೆ ಸಾಕಷ್ಟು ರಾಜಕೀಯ ಚರ್ಚೆಗಳು ನಡೆಯುತ್ತಿವೆ. ಆದ್ರೆ ಮುಖ್ಯಮಂತ್ರಿ ಯಡಿಯೂರಪ್ಪನವರ ಬೆನ್ನಿಗೆ ಅವರ ಪಕ್ಷದವರೇ ಚೂರಿ ಹಾಕಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಇದು ಬಿಜೆಪಿಯ ಆಂತರಿಕ ವಿಚಾರವಾಗಿದ್ದು, ನಾನೇನು ಮಾತನಾಡಲ್ಲ ಎಂದರು. ಆದ್ರೆ, ಕಳೆದ ಆರು ತಿಂಗಳಿನಿಂದ ಸರ್ಕಾರದ ಕಾರ್ಯಕ್ರಮಗಳು ಕುಂಠಿತಗೊಂಡಿವೆ. ಕೊರೊನಾ ಆದ್ಮೇಲೆ ನಾಯಕತ್ವ ಬದಲಾವಣೆ ಚರ್ಚೆ ನಡೆಯುತ್ತಿದೆ. ಇವರು ದೆಹಲಿಗೆ ಹೋದ್ರು, ಅವರು ದೆಹಲಿಗೆ ಹೋದ್ರು ಎಂಬ ಮಾತುಗಳೇ ಕೇಳಿ ಬರುತ್ತಿವೆ. ಹೀಗಾಗಿ ತಮ್ಮ ತಮ್ಮ ಜವಾಬ್ದಾರಿಗಳನ್ನು ಮಂತ್ರಿಗಳು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಲಿಂಗಾಯತರು ಪೂರ್ಣಾವಧಿ ಸರ್ಕಾರ ನಡೆಸಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನನಗೇನೋ ಹಾಗೆ ಅನಿಸಿಲ್ಲ. ಸಮಯ ಸಂದರ್ಭಕ್ಕನುಗುಣವಾಗಿ ಅವಧಿ ಪೂರ್ವಗೊಳಿಸಿಲ್ಲ ಎಂದ ಅವರು, ಯಡಿಯೂರಪ್ಪನವರ ಬೆನ್ನಿಗೆ ಅವರ ಪಕ್ಷದವರೇ ಚೂರಿ ಹಾಕಿದ್ದಾರೆ. ಇನ್ನೇನು ಕಾಂಗ್ರೆಸ್ನವರಾದ ನಾವು ಚೂರಿ ಹಾಕಲು ಸಾಧ್ಯನಾ..? ಎಂದು ಪ್ರಶ್ನಿಸಿದ್ರು. ಯಡಿಯೂರಪ್ಪನವರು ಯಾರನ್ನ ಬೆಳೆಸಿದ್ರೋ, ಅವರೇ ಇಂದು ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೊರಟಿದ್ದಾರೆ ಎಂದರು.
ಹೇಗೆ ಸಾಂತ್ವನ ಹೇಳಬೇಕೋ ಗೊತ್ತಾಗುತ್ತಿಲ್ಲ:
2019 ರಲ್ಲೂ ಜಿಲ್ಲೆಗೆ ಸಾಕಷ್ಟು ಅನ್ಯಾಯ ಆಗಿದೆ. ಅಂದಿನ ನೆರೆಯ ಪರಿಹಾರದ ಹಣ ಈವರೆಗೆ ಸಿಕ್ಕಿಲ್ಲ. ಈ ಬಗ್ಗೆ ಹಲವು ಬಾರಿ ಸರ್ಕಾರದ ಗಮನ ಸೆಳೆದಿದ್ದೇವೆ. ಆದರೂ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದ್ರು. ಸದ್ಯ ಮತ್ತೆ ಮಾರ್ಕಂಡೇಯ ನಗರದಲ್ಲಿ ಏಳು ಮನೆಗಳು ಉರುಳಿವೆ. ಪ್ರವಾಹ, ಕೊರೊನಾ ಭಯ ಜನರಲ್ಲಿದ್ದು, ಇಂಥ ಸಂದರ್ಭದಲ್ಲಿ ಜನರಿಗೆ ಹೇಗೆ ಸಾಂತ್ವನ ಹೇಳಬೇಕು ಅಂತಾ ಗೊತ್ತಾಗುತ್ತಿಲ್ಲ. ಹೀಗಾಗಿ ಇಂತಹ ಕಠಿಣ ಪರಿಸ್ಥಿತಿಯಲ್ಲಿ ವಿಪಕ್ಷದ ಸ್ಥಾನದಲ್ಲಿ ನಿಂತು ಜನರ ಸಮಸ್ಯೆಗಳನ್ನು ಆಲಿಸಿ, ಸರ್ಕಾರಕ್ಕೆ ವರದಿ ಒಪ್ಪಿಸುವ ಕಾರ್ಯ ಮಾಡುತ್ತೇವೆ. ಹಾಗಾಗಿಯೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದರು.
ಗೋವಿಂದ ಕಾರಜೋಳಗೆ ಟಾಂಗ್
ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಕಾರಜೋಳ ಸಾಹೇಬ್ರು ಹಿರಿಯರು, ದೊಡ್ಡವರು. ಅವರು ಹಾಗೇ ತಿಳಿದುಕೊಂಡ್ರೆ ಅವರಿಗೆ ಒಳ್ಳೆಯದಾಗಲಿ. ಆದ್ರೆ, ಕಾಂಗ್ರೆಸ್ ಅಧಿಕಾರದಲ್ಲಿರಲಿ, ಇಲ್ಲದಿರಲಿ ಜನರ, ಸಮಾಜದ ಪರವಾಗಿ ಕೆಲಸ ಮಾಡುತ್ತದೆ. ಕಾಂಗ್ರೆಸ್ ಸ್ವಾರ್ಥಕ್ಕೆ ಕೆಲಸ ಮಾಡುತ್ತಿಲ್ಲ. ಜನಸೇವೆಗೆ ಕೆಲಸ ಮಾಡುತ್ತಿದೆ ಎಂದು ಟಾಂಗ್ ನೀಡಿದ್ರು.
ಇದನ್ನೂ ಓದಿ :ಸಿಎಂ ಹುದ್ದೆಗೆ ಲಾಬಿ ಮಾಡ್ತಿಲ್ಲ, ಹೈಕಮಾಂಡ್ ನಿರ್ಧಾರವೇ ಅಂತಿಮ: ನಿರಾಣಿ