ಬೆಳಗಾವಿ : 2ಎ ಮೀಸಲಾತಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಫೆ.21ಕ್ಕೆ ನಡೆಯಲಿರುವ ಲಿಂಗಾಯತ ಪಂಚಮಸಾಲಿ ಸಮಾವೇಶದಲ್ಲಿ 10 ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ತಿಳಿಸಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮುದಾಯದ ಸಚಿವರ ಹಾಗೂ ಶಾಸಕರ ಸಮ್ಮುಖದಲ್ಲಿ ಇಂದು ಸಮಾವೇಶ ನಡೆಯಲಿದೆ. ಸಭೆಗೆ ಹಾಜರಾಗಲು ಬೆಂಗಳೂರಿಗೆ ಹೊರಟಿದ್ದೇನೆ. ಈಗಾಗಲೇ ಸ್ವಾಮೀಜಿಗಳು ಸಭೆ ನಡೆಸಿದ್ದಾರೆ.
ಇಂದು ಸಂಜೆ ಸಹ ಸಭೆ ಕರೆದಿದ್ದಾರೆ. ಸಚಿವ ಮುರಗೇಶ ನಿರಾಣಿ, ಅರವಿಂದ ಬೆಲ್ಲದ, ನಾನು ಸೇರಿ ಪಕ್ಷಾತೀತವಾಗಿ ಎಲ್ಲ ನಮ್ಮ ಸಮುದಾಯದ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ. 10 ಲಕ್ಷ ಜನರನ್ನ ಸೇರಿಸಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದರು.
ಪಂಚಮಸಾಲಿ ಹೋರಾಟ ದಿಕ್ಕು ತಪ್ಪಿಸುವ ಕೆಲಸವಾಗ್ತಿದೆ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆದರೆ, ಸಮುದಾಯದ ಎಲ್ಲ ಸ್ವಾಮೀಜಿಗಳು ಸೇರಿ ಸಿಎಂಗೆ ಮನವಿ ಕೊಟ್ಟಿದ್ದಾರೆ.
ಮುಂದಿನ ದಿನಗಳಲ್ಲಿ ಸಮುದಾಯದ ಯುವಕರಿಗೆ ಅನುಕೂಲ ಆಗಲಿ ಎಂಬುವುದು ಎಲ್ಲರ ಉದ್ದೇಶ. ಇಂದು ಸಂಜೆ ಸಭೆಯಲ್ಲಿ ಏನೇನು ತೀರ್ಮಾನ ಆಗುತ್ತದೆ ನೋಡೋಣ ಎಂದರು.
ಪ್ರವಾಹ ಪರಿಹಾರ ಇನ್ನೂ ಬಂದಿಲ್ಲ : ಪ್ರವಾಹಕ್ಕೆ ತುತ್ತಾಗಿದ್ದ ನನ್ನ ಕ್ಷೇತ್ರಕ್ಕೆ ಇನ್ನೂ ಅನುದಾನ ಬಂದಿಲ್ಲ. ಕೋವಿಡ್ ಹಿನ್ನೆಲೆ ಅನುದಾನ ಕಡಿಮೆ ಕೊಟ್ಟಿದ್ದಾರೆ. ಮನೆಗಳ ಹಾನಿಗೆ ಒಂದು ಲಕ್ಷ ಹಣ ಮಾತ್ರ ಕೊಟ್ಟಿದ್ದಾರೆ. ಎರಡನೇ ಹಂತದ ಹಣ ಕೊಟ್ಟಿಲ್ಲ.
ಸಾಕಷ್ಟು ಬಾರಿ ಸಿಎಂ ಮನೆಗೆ ಹೋಗಿ ಮನವಿ ಮಾಡಿದ್ದೇವೆ. ಆದರೆ, ಈವರೆಗೂ ಅನುದಾನ ಕೊಟ್ಟಿಲ್ಲ, ಬರೀ ಲಿಖಿತ ಭರವಸೆ ಬಂದಿದೆ. ನೀರಾವರಿ ಸಚಿವರು ನಮ್ಮ ಜಿಲ್ಲೆಯವರಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ನಮಗೆ ಸಹಕಾರ ಕೊಟ್ಟಿದ್ದಾರೆ ಎಂದು ಶಾಸಕ ಹುಕ್ಕೇರಿ ಪ್ರತಿಕ್ರಿಯೆ ನೀಡಿದರು.
ಬೆಳಗಾವಿ ಲೋಕಸಭೆಗೆ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಹೈಮಾಂಡ್‌ಗೆ ಮೂವರು ಆಕಾಂಕ್ಷಿಗಳ ಹೆಸರು ಶಿಫಾರಸು ಮಾಡಲಾಗಿದೆ. ಹೈಕಮಾಂಡ್ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ. ಸತತವಾಗಿ 40 ವರ್ಷಗಳಿಂದ ಪ್ರಕಾಶ್ ಹುಕ್ಕೇರಿ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಸತೀಶ್ ಜಾರಕಿಹೊಳಿ ಜೊತೆ ಸೇರಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ ಎಂದರು.
ಪ್ರಕಾಶ್ ಹುಕ್ಕೇರಿ ಅವರನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಪ್ರಕಾಶ್ ಹುಕ್ಕೇರಿ ಹೀಗೆ ಹೇಳಿಲ್ಲ ಎಂದರು.