ಬೆಳಗಾವಿ: ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಜುಲೈನಿಂದ ಸೆಪ್ಟೆಂಬರ್‌ವರೆಗೆ ಸುರಿದ ಅತಿಯಾದ ಮಳೆಯಿಂದಾಗಿ ತೊಗರಿ ಬೆಳೆಯು ಸಂಕೀರ್ಣ ನೆಟೆ/ಸೊರಗು ರೋಗಕ್ಕೆ ತುತ್ತಾಗಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಕೃಷಿ ಸಚಿವರು ವೈಯಕ್ತಿಕವಾಗಿ ಸದರಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರು ಭರವಸೆ ನೀಡಿದರು.
ವಿಧಾನಸಭೆಯಲ್ಲಿ ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಖಾಶೆಂಪುರ ಹಾಗೂ ಆಳಂದ ಶಾಸಕ ಸುಭಾಷ ಗುತ್ತೇದಾರ್ ಅವರ ಪ್ರಶ್ನೆಗೆ ಕೃಷಿ ಸಚಿವರ ಪರವಾಗಿ ಉತ್ತರಿಸಿದ ಅವರು, ಕಲಬುರಗಿ ಜಿಲ್ಲೆಯಲ್ಲಿ ಅಂದಾಜು 69,746 ಹೆಕ್ಟೇರ್ ಮತ್ತು ಬೀದರ್ ಜಿಲ್ಲೆಯಲ್ಲಿ ಅಂದಾಜು 10,426 ಹೆಕ್ಟೇರ್ ಪ್ರದೇಶವು ತೊಗರಿಯ ಸಂಕೀರ್ಣ ನೆಟೆ/ಸೊರಗು ರೋಗದಿಂದ ನಾಶವಾಗಿದೆ. ಈ ಕುರಿತು ವೈಯಕ್ತಿಕವಾಗಿ ಸದರಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಬೆಳೆಕಟಾವು ಪ್ರಯೋಗದ ವರದಿ ಆಧಾರದ ಮೇಲೆ ಬೆಳೆಯ ಇಳುವರಿ ಕಡಿಮೆ ಬಂದ ನಂತರ ವಿಮಾ ಸಂಸ್ಥೆಯಿಂದ ಬೆಳೆವಿಮೆ ಮಾಡಿಸಿರುವ ರೈತರಿಗೆ ಪರಿಹಾರ ಒದಗಿಸಲಾಗುವುದು. ತೊಗರಿ ನೆಟೆ ರೋಗ ಬಾಧೆಗೆ ತುತ್ತಾದ ಪ್ರದೇಶಗಳಲ್ಲಿ ಕೃಷಿ ವಿಶ್ವವಿದ್ಯಾಲಯ ವಿಜ್ಞಾನಿಗಳ ತಂಡದೊಂದಿಗೆ ಇಲಾಖಾ ಅಧಿಕಾರಿಗಳು ಗ್ರಾಮವಾರು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಗಳ ಮೂಲಕ ಕ್ಷೇತ್ರ ಭೇಟಿ ಮಾಡಿ ಸರ್ವೇಕ್ಷಣೆಯನ್ನು ಕೈಗೊಂಡು ರೋಗ ನಿಯಂತ್ರಣ ಕುರಿತು ಮಾಧ್ಯಮಗಳ ಮೂಲಕ ಮುಂಜಾಗ್ರತಾ ಕ್ರಮಗಳ ಮಾಹಿತಿಯನ್ನು ರೈತರಿಗೆ ಒದಗಿಸಲಾಗುತ್ತಿದೆ ಎಂದು ವಿವರಿಸಿದರು.
ಈ ಭಾಗದ ಪ್ರಮುಖ ಬೆಳೆಯಾಗಿರುವ ತೊಗರಿ ಅತಿಯಾದ ಮಳೆಯಿಂದಾಗಿ ಹಾನಿಯಾಗಿರುವುದರಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅಡಿ ಪ್ರತಿ ಹೆಕ್ಟೇರ್‌ಗೆ 50 ಸಾವಿರ ಪರಿಹಾರ ಒದಗಿಸುವ ಮೂಲಕ ಆಘಾತಕ್ಕೊಳಗಾಗಿರುವ ರೈತರ ನೆರವಿಗೆ ಧಾವಿಸಬೇಕು ಎಂದು ಶಾಸಕರಾದ ಬಂಡೆಪ್ಪ ಖಾಶೆಂಪುರ ಮತ್ತು ಸುಭಾಷ್ ಗುತ್ತೇದಾರ ಮನವಿ ಮಾಡಿದರು.
'ಉಡಾಫೆ' ಜಟಾಪಟಿ: ಇದೇ ವೇಳೆ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಬಳಸಿದ 'ಉಡಾಫೆ' ಪದ ಸಚಿವ ಎಸ್.ಟಿ ಸೋಮಶೇಖರ್ ಕೆರಳಿದ ಘಟನೆ ನಡೆಯಿತು. ಚರ್ಚೆ ವೇಳೆ ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ, ಸಚಿವರು ತಪ್ಪು ಉತ್ತರ ಕೊಟ್ಟಿದ್ದಾರೆ. ಎನ್ಡಿಆರ್ಎಫ್ ಪರಿಹಾರದ ವ್ಯಾಪ್ತಿಯಲ್ಲಿ ತೊಗರಿ ರೋಗಬಾಧೆ ಬರುವುದಿಲ್ಲ. ಇಂತಹ ಉಡಾಫೆ ಉತ್ತರ ಕೊಟ್ಟ ಸರ್ಕಾರ ರೈತರ ಪರವಾಗಿದೆ ಎಂದು ಹೇಳಿ ಕೊಳ್ಳುತ್ತಾರೆ ಎಂದು ಕಿಡಿಕಾರಿದರು.
ಇದಕ್ಕೆ ಆಕ್ಷೇಪ ಎತ್ತಿದ ಎಸ್ ಟಿ ಸೋಮಶೇಖರ್ ಉಡಾಫೆ ಪದವನ್ನು ವಾಪಸ್ ಪಡೆಯಬೇಕು ಎಂದು ಗರಂ ಆದರು. ಕರೆಕ್ಟಾಗಿ ಮಾತನಾಡಬೇಕು. ಸದನದಲ್ಲಿ ಉಡಾಫೆ ಮಾತನಾಡಲು ಕುಳಿತಿಲ್ಲ ನಾನು. ಸರಿಯಾಗಿ ಮಾಹಿತಿ ಕೊಟ್ಟಿದ್ದೇನೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಉಡಾಫೆ ಗಿಡಾಫೆ ಪದ ಬಳಸಬಹುದಾ? ಅವರಿಗೆ ಎಂದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ವಿರೋಧ ಪಕ್ಷದ ನಾಯಕ ಉಡಾಫೆ ಎಂಬುದು ಅಸಂವಿಧಾನಿಕ ಪದವೇ?. ಸರ್ಕಾರ ಉಡಾಫೆ ಉತ್ತರ ಕೊಟ್ಟಿದೆ ಎಂದರೆ ತಪ್ಪೇನಿಲ್ಲ ಎಂದರು.
ಓದಿ: ಹುಬ್ಬಳ್ಳಿ ದರ್ಗಾ ತೆರವು ವಿಚಾರ ಸಿಎಂ ಬಳಿ ಮಾಹಿತಿ ಪಡೆದು ವಿವರಣೆ ನೀಡುವೆ: ಕೋಟ ಶ್ರೀನಿವಾಸ ಪೂಜಾರಿ