ಬೆಳಗಾವಿ: ಕೋವಿಡ್ ಸಂದರ್ಭದಲ್ಲಿ ಹತ್ತು ರೂಪಾಯಿಗೆ ಸಿಗುವ ವಸ್ತುವಿಗೆ ನೂರು ರೂಪಾಯಿ, ನೂರು ರೂ. ವಸ್ತುವಿಗೆ 1 ಸಾವಿರ ರೂ. ಕೊಟ್ಟು ಹಿಂದಿನ ಬಿಜೆಪಿ ಸರ್ಕಾರ ಖರೀದಿ ಮಾಡಿದೆ. ಈ ಬಗ್ಗೆ ನಾವೇ ಆರೋಪ ಮಾಡಿದ್ದೆವು. ಹಾಗಾಗಿ ತನಿಖೆ ಮಾಡೋದು ಸೂಕ್ತ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳ ತನಿಖೆಗೆ ಸರ್ಕಾರ ಆದೇಶಿಸಿರುವ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ತನಿಖೆ ಮಾಡಲೇಬೇಕು. ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ತನಿಖೆ ಮಾಡುವಂತೆ ಒತ್ತಾಯ ಮಾಡಿದ್ದೇವು. ಬಿಜೆಪಿ ಸರ್ಕಾರದಲ್ಲಿ ಮಿತಿ ಮೀರಿ ಹಗರಣಗಳು ನಡೆದಿವೆ. ಹಗರಣದಲ್ಲಿ ಸಂಬಂಧಪಟ್ಟ ಹಿಂದಿನ ಸಚಿವರು ಮತ್ತು ಅಧಿಕಾರಿಗಳು ಭಾಗಿಯಾಗಿರುತ್ತಾರೆ. ಸಂಪೂರ್ಣ ತನಿಖೆಯಾದ ಬಳಿಕ ಎಲ್ಲವೂ ಗೊತ್ತಾಗುತ್ತೆ. ಎಸ್‌ಐಟಿಗೆ ಒಪ್ಪಿಸುತ್ತಿದ್ದೇವೆ, ಅಧಿಕಾರಿಗಳ ಹಂತದಲ್ಲಿ ವಿಚಾರಣೆ ಆಗುತ್ತಿದೆ. ಆರೋಪ ಮಾಡಿದವರು ನಾವು ನಮ್ಮ ಬಳಿ ಅಧಿಕಾರ ಇದೆ ಅದನ್ನು ಒಂದು ಹಂತಕ್ಕೆ ಒಯ್ಯುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.
ಮಾಜಿ ಆರೋಗ್ಯ ಸಚಿವ ಸುಧಾಕರ್ ಕಾಂಗ್ರೆಸ್‌ಗೆ ಬಂದರೆ ತನಿಖೆ ಆಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾರೇ ಕಾಂಗ್ರೆಸ್‌ಗೆ ಬಂದರೂ ಬರದಿದ್ದರೂ ತನಿಖೆ ಆಗುತ್ತದೆ. ಹಗರಣಗಳ ತನಿಖೆಗೆ ಆದೇಶಿಸಿ ಮಾಜಿ ಸಚಿವರನ್ನು ಹೆದರಿಸುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಹೆದರಿಸಲು ಅವರೇನೂ ಶಾಸಕರಿದ್ದಾರಾ?, ಅವರೇನೂ ಸರ್ಕಾರ ಬೀಳಿಸ್ತಾರಾ, ಈಗ ಅವರು ಖಾಲಿ ಇದ್ದಾರೆ. ಹೆದರಿಸುವಂತದ್ದು ಏನಿಲ್ಲಾ ಅವರ ಮೇಲೆ ಆರೋಪ ಇದೆ, ತನಿಖೆ ಆಗಲಿ. ಅವರನ್ನ ಕರೆದುಕೊಂಡು ಬರಲು ಏನು ತಂತ್ರಗಾರಿಕೆ ಇಲ್ಲಾ. ಒಬ್ಬರ ಮೇಲೆ ಅಷ್ಟೇ ಅಲ್ಲ, ಇನ್ನೂ ಬಹಳಷ್ಟು ಜನರ ವಿರುದ್ಧ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಲೋಕಸಭೆ ಚುನಾವಣೆಗೆ ಜಾರಕಿಹೊಳಿ ಕುಟುಂಬದಿಂದ ಸ್ಪರ್ಧೆ ಮಾಡ್ತಾರಾ ಎಂಬ ವಿಚಾರವಾಗಿ ಮಾತನಾಡಿ, ಸದ್ಯಕ್ಕೆ ಇಲ್ಲಾ ಮುಂದೆ ನೋಡೋಣ. ಬಹಳ ಜನ ಆಕಾಂಕ್ಷಿಗಳಿದ್ದಾರೆ. ಅವರು ಬಹಿರಂಗವಾಗಿ ಬಂದು ನಿಲ್ಲುತ್ತೇವೆ ಎಂದು ಹೇಳಬೇಕು, ಆಮೇಲೆ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಚರ್ಚಿಸುತ್ತೇವೆ ಎಂದು ಹೇಳಿದರು. ಸರ್ಕಾರಕ್ಕೆ ನೂರು ದಿನಗಳು ತುಂಬಿರುವ ಬಗ್ಗೆ ಉತ್ತರಿಸಿ, ಕಳೆದ ಮೂರು ತಿಂಗಳಲ್ಲಿ ರಾಜ್ಯ ಸರ್ಕಾರ ಉತ್ತಮವಾಗಿ ಕೆಲಸ ಮಾಡಲು ಪ್ರಯತ್ನಿಸಿದೆ. ಸರ್ಕಾರ ಉತ್ತಮ ಪರ್ಫಾರ್ಮೆನ್ಸ್ ನೀಡಲು ಆರು ತಿಂಗಳಾದರೂ ಕಾಲಾವಕಾಶ ಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗುತ್ತಿರುವ ಬಗ್ಗೆ ಮಾತನಾಡಿ, ದೆಹಲಿ ವಿಶೇಷ ಪ್ರತಿನಿಧಿಯಾಗಿ ನೇಮಿಸಿ ಸರ್ಕಾರ ಅವರಿಗೆ ಜವಾಬ್ದಾರಿ ನೀಡಿದೆ. ಹಾಗಾಗಿ ಬಾಕಿ ಇರುವ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಕಡತಗಳನ್ನು ವಿಲೇವಾರಿಗೊಳಿಸಲು ಕೇಂದ್ರ ಸಚಿವರನ್ನು ಭೇಟಿಯಾಗುತ್ತಾರೆ ಎಂದರು. ಬೆಳಗಾವಿಯಲ್ಲಿ ನೈತಿಕ ಪೊಲೀಸ್‌ಗಿರಿ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಇಂತಹ ಘಟನೆಗಳಿಗೆ ಬೆಳಗಾವಿ ಮತ್ತು ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಇಂತಹ ಪ್ರಕರಣಗಳು ಗಮನಕ್ಕೆ ಬಂದರೆ ಪೊಲೀಸರು ಗಂಭೀರವಾಗಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್ : ಕೇಂದ್ರ ಸಚಿವ ಜೋಶಿ ವಾಗ್ದಾಳಿ