ಬೆಳಗಾವಿ: ಕುಂಭದ್ರೋಣ ಮಳೆಯಿಂದ ಜಿಲ್ಲೆಯ ಜನರು ತತ್ತರಿಸಿದ್ದಾರೆ. ಈ ನಡುವೆ ಸಂತ್ರಸ್ತರ ಸಮಸ್ಯೆ ಆಲಿಸಲು ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಮಾತ್ರ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಚುನಾವಣೆಯ ತಯಾರಿಯಲ್ಲಿ ನಿರತರಾಗಿದ್ದರು.
ಕುಂಭದ್ರೋಣ ಮಳೆಯಿಂದ ಜಿಲ್ಲೆಯಲ್ಲಿ ಓರ್ವ ಮೃತಪಟ್ಟಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಸಚಿವರಿಗೆ ಸಮಯ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ 332 ಮನೆಗಳು ಕುಸಿದಿದ್ದು, ಮನೆ ಕಳೆದುಕೊಂಡವರ ಬದುಕು ಬೀದಿಗೆ ಬಿದ್ದಿದೆ. 35 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಅಲ್ಲದೇ ಹುಕ್ಕೇರಿ, ಅಥಣಿ, ಚಿಕ್ಕೋಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಮತ್ತೆ ಪ್ರವಾಹ ಭೀತಿ ಎದುರಾಗಿದೆ.
ಪ್ರವಾಹದ ಮುನ್ನೆಚ್ಚರಿಕೆ ಸಂಬಂಧ ಮಧ್ಯಾಹ್ನ 12ಕ್ಕೆ ಸಭೆ ಕರೆದಿದ್ದ ಸಚಿವರು ಚುನಾವಣೆಯಲ್ಲಿ ಬ್ಯುಸಿಯಾಗಿದ್ದರು. ಅಧಿಕಾರಿಗಳು ಸಚಿವರಿಗೆ ಕಾದು ಕಾದು ಸುಸ್ತಾದರು. ಸಭೆಯತ್ತ ಗಮನ ಹರಿಸದೇ ಸಚಿವರು ಚುನಾವಣೆಯಲ್ಲಿ ತಲ್ಲೀನರಾಗಿದ್ದು, ಬಳಿಕ ನಿಗದಿತ ಸಮಯಕ್ಕಿಂತ ಮೂರುಗಂಟೆ ನಂತರ ಆಗಮಿಸಿ ಸಭೆ ನಡೆಸಿದರು.