ಬೆಳಗಾವಿ: ವಿಕಲಚೇತನರ ಏಳಿಗೆಗಾಗಿ ದುಡಿಯುತ್ತಿರುವ ಸಮರ್ಥನಂ ವಿಕಲಚೇತನರ ಸಂಸ್ಥೆಗೆ ತಕ್ಷಣವೇ ನಿವೇಶನ ನೀಡಿ, ಜಿಲ್ಲೆಯ ಜನಪ್ರತಿನಿಧಿಗಳ ಅನುದಾನದಲ್ಲಿ ಒಂದು ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು ಎಂದು ಜಿಲ್ಲಾಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ನಗರದ ಬಸವರಾಜ್ ಕಟ್ಟಿಮನಿ ಪ್ರತಿಷ್ಠಾನ ಸಭಾಭವನದಲ್ಲಿ ಮಹಾಮಾರಿ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್‍ಗಳು, ಪೊಲೀಸರು, ಪೌರಕಾರ್ಮಿಕರು ಆಶಾ ಕಾರ್ಯಕರ್ತೆಯರು ಹಾಗೂ ಜಿಲ್ಲಾಸ್ಪತ್ರೆಗೆ ಸಮರ್ಥನಂ ಅಂಗವಿಕಲ ಸಂಸ್ಥೆಯ ವತಿಯಿಂದ 60 ಲಕ್ಷ ವೆಚ್ಚದ ಕೋವಿಡ್ ಸಂರಕ್ಷಣಾ ಕಿಟ್ ಸೇರಿ ವಿವಿಧ ವೈದ್ಯಕೀಯ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು. ಸಮರ್ಥನಂ ಅಂಗವಿಕಲ ಸಂಸ್ಥೆಯ ಕಾರ್ಯಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದ್ರೂ ಕಡಿಮೆಯೆ. ಅವರ ಸಾಮಾಜಿಕ ಸೇವೆ ಹೀಗೆ ಮುಂದುವರೆಯಬೇಕೆಂಬ ಉದ್ದೇಶದಿಂದ ಒಂದು ಸುಸಜ್ಜಿತವಾದ ಕಟ್ಟಡವನ್ನು ಸರ್ಕಾರದ ವತಿಯಿಂದ ಕಟ್ಟಿಸಿಕೊಡಲಾಗುವುದು ಎಂದರು.
ಕೇಂದ್ರ ಸಚಿವ ಸುರೇಶ ಅಂಗಡಿ ಮಾತನಾಡಿ, ಸಮರ್ಥನಂ ಅಂಗವಿಕಲ ಸಂಸ್ಥೆ ಈವರೆಗೆ 3 ಕೋಟಿ ವೆಚ್ಚದ ವೈದ್ಯಕೀಯ ಸಾಮಗ್ರಿಗಳನ್ನು ಹಂಚುವ ಮೂಲಕ ಸಮಾಜಕ್ಕೆ ಬಹು ದೊಡ್ಡ ಕಾಣಿಕೆ ನೀಡಿದೆ. ಇಲ್ಲಿರುವ ವಿಕಲಚೇತನರು ಕಣ್ಣಿಲ್ಲದಿದ್ದರೂ ಕೂಡ ಅತ್ಯಂತ ಶಿಸ್ತುಬದ್ಧವಾಗಿ ಎಲ್ಲಾ ನಿಯಮಗಳನ್ನು ಪಾಲಿಸುತ್ತಿರುವುದು ಮಾದರಿಯಾಗಿದೆ ಎಂದರು.