ಬೆಳಗಾವಿ: 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲ ಸಂಗಮ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚಮಸಾಲಿ ಸಮುದಾಯದ ಹೋರಾಟದ ಹೆಸರಲ್ಲಿ ದೇವರಾಣೆ ನಾನು ಮಂತ್ರಿಯಾಗಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ಸ್ಪಷ್ಟಪಡಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವ ಜಯಮೃತ್ಯುಂಜಯ ಸ್ವಾಮೀಜಿ ನಮ್ಮ ಗುರುಗಳು. ಅವರನ್ನು ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಮಾಡಿದ್ದೇ ನಾವು. ಸ್ವಾಮೀಜಿ ಯಾರ ಬಗ್ಗೆ ಆರೋಪ ಮಾಡಿದ್ದಾರೆ ಎಂಬುದು ನಂಗೆ ಗೊತ್ತಿಲ್ಲ. ಪಂಚಮಸಾಲಿ ಪೀಠದ ಏಳಿಗೆಗೆ ಕಳೆದ 10 ವರ್ಷಗಳಿಂದ ನಾನೂ ಶ್ರಮಿಸಿದ್ದೇನೆ. 2ಎ ಮೀಸಲಾತಿ ಕಲ್ಪಿಸಲು ಮಂತ್ರಿ ಆಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಉಳಿದವರಂತೆ ರಸ್ತೆ ಮೇಲೆ ನಿಂತು ಹೋರಾಟ ಮಾಡಲು ನಮಗೆ ಆಗಲ್ಲ. ಮಂತ್ರಿ ಆಗಿ ನನಗೆ ನನ್ನದೇ ಆದ ಚೌಕಟ್ಟುಗಳಿವೆ ಎಂದರು.
ಮೀಸಲು ಹೋರಾಟ ಮಾಡಿದವರಲ್ಲಿ ಮೊದಲಿಗ ನಾನೇ!
2ಎ ಮೀಸಲಾತಿ ಸಿಗಬೇಕೆಂದು ಹೋರಾಟ ಮಾಡಿದವರಲ್ಲಿ ಮೊದಲಿಗ ನಾನು. ವೀರಶೈವ ಲಿಂಗಾಯತ ಸಮುದಾಯ ಮೊದಲು ಜಾತಿ ಕಾಲಂನಲ್ಲಿ ಇರಲಿಲ್ಲ. 2010 ರಲ್ಲಿ ಬಿಎಸ್‌ವೈ ಸಿಎಂ ಆಗಿದ್ದಾಗ ವೀರಶೈವ ಲಿಂಗಾಯತ ಜಾತಿ ಕಾಲಂಗೆ ಸೇರಿಸಲು ಶ್ರಮ ವಹಿಸಿದ್ದೇ ನಾನು. ಈಗ ಉಳಿದವರಂತೆ ಎಲ್ಲ ಕಡೆ ಹೋಗಿ ಪಾದಯಾತ್ರೆ ಮಾಡಲು ಆಗಲ್ಲ. ಸ್ವಾಮೀಜಿಗೆ ಮಾನಸಿಕ ಕಿರುಕುಳ ಕೊಡ್ತಿರುವವರು ಯಾರು ಎಂಬುದು ಗೊತ್ತಿಲ್ಲ. ಕಿರುಕುಳವನ್ನು ನೀಡುತ್ತಿರುವವರ ಹೆಸರನ್ನು ಸ್ವಾಮೀಜಿ ಹೇಳಿಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ ನಾನೇಕೆ ಹೆಗಲು ಮುಟ್ಟಿಕೊಂಡು ನೋಡಬೇಕು ಎಂದರು.
ಸಣ್ಣತನ ನನಗಿಲ್ಲ: 'ಜಮಖಂಡಿಗೆ ಬಂದ್ರೆ ಕಲ್ಲು ಎಸೆಯುತ್ತೇನೆ' ಎಂದು ಧಮ್ಕಿ ನೀಡಿರುವ ಆರೋಪದ ವಿಚಾರವಾಗಿ ಮಾತನಾಡಿದ ಅವರು, ನಾನು 20 ಕಾರ್ಖಾನೆ ಮಾಲೀಕ. 70 ಸಾವಿರ ಜನರಿಗೆ ಉದ್ಯೋಗ ನೀಡಿದ್ದೇನೆ. ಸಣ್ಣತನದ ವ್ಯಕ್ತಿತ್ವ ನನ್ನದಲ್ಲ. ನಮ್ಮವರು ನನ್ನ ಬಗ್ಗೆ ಮಾತನಾಡಲಿ ಬಿಡಿ. ಪಂಚಮಸಾಲಿ ಸಂಘಟನೆ ಮಾಡ್ತಿದ್ದಾರೆ. ಅದಕ್ಕೆ ಅವರಿಗೆ ನನ್ನ ಬೆಂಬಲ ಇದೆ. ಕಲ್ಲು ಎಸೆಯುವ, ತತ್ತಿ ಒಗೆಯುವ ಸಣ್ಣತನದ ಜಾಯಮಾನ ನನ್ನದಲ್ಲ.
ನನ್ನ ಕಾರ್ಖಾನೆ ಮುಂದೆ 20 ವರ್ಷ ಪ್ರತಿಭಟನೆ ನಡೆದರೂ ನಾನು ಅವರಿಗೆ ಏನೂ ಅಂದಿಲ್ಲ. ದೇವರು ಅವರಿಗೆ ಒಳ್ಳೆಯ ಬುದ್ದಿ ನೀಡಲಿ ಎಂದು ಹೇಳುವ ಕುಟುಂಬ ನಮ್ಮದು. ಅವರು ನನಗೆ ಅಂದಿದ್ದಾರೆಯೇ? ಅದಕ್ಕೇಕೆ ನಾನು ಉತ್ತರಿಸಲಿ? ಸ್ವಾಮೀಜಿ ಹಾಗೂ ಹೋರಾಟಗಾರರು ನನ್ನ ಜೊತೆ ಮಾತನಾಡಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ಸಮಸ್ತ ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಸಿಗಲಿ: ಮಂತ್ರಿ ಆದ ನಂತರ ಹೋರಾಟದಿಂದ ದೂರ ಉಳಿದಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕನಾಗಿದ್ದುಕೊಂಡು ಹೋರಾಟ ಮಾಡುವುದು ಬೇರೆ. ಮಂತ್ರಿ ಆದ ಮೇಲೆ ಸರ್ಕಾರ ಮಟ್ಟದಲ್ಲಿ ಪ್ರಯತ್ನ ಮಾಡುವುದು ಇರುತ್ತದೆ. 2ಎ ಮೀಸಲಾತಿ ಸಮಸ್ತ ವೀರಶೈವ ಲಿಂಗಾಯತರಿಗೆ ಸಿಗಬೇಕು.
ವೀರಶೈವ ಲಿಂಗಾಯತ ಸಮುದಾಯದಲ್ಲಿ 17 ಜನ ಶಾಸಕರಿದ್ದೇವೆ. ಹೋರಾಟ ಮಾಡಲು ನಮಗೆ ಶಕ್ತಿ ಬರುತ್ತದೆ. ವೀರಶೈವ ಲಿಂಗಾಯತ ಸಮುದಾಯದ ಕೆಲ ಉಪಪಂಗಡಗಳನ್ನು ಪ್ರತಿನಿಧಿಸುವ ಶಾಸಕರಿಲ್ಲ. ಅವರ ಬಗ್ಗೆ ಧ್ವನಿ ಎತ್ತುವವರ್ಯಾರು? ಇನ್ನು ಮೀಸಲಾತಿ ನೀಡಲು ಮುಖ್ಯಮಂತ್ರಿಗಳು ಒಲವು ತೋರಿದ್ದಾರೆ. ಹೋರಾಟದ ಹೆಸರಲ್ಲಿ ದೇವರಾಣೆ ನಾನು ಮಂತ್ರಿಸ್ಥಾನ ಪಡೆದಿಲ್ಲ. ಪೀಠ ಹುಟ್ಟುವ ಮುನ್ನವೇ ನಾನು ಮಂತ್ರಿ ಆಗಿದ್ದೇನೆ.
ನಮ್ಮ ಸ್ವಾಮೀಜಿ ದೊಡ್ಡ ಮನಸಿನವರಿದ್ದಾರೆ. ನನ್ನ ಬಗ್ಗೆ ಮಾತನಾಡಿಲ್ಲ. ನನ್ನ ಮೇಲೆ ಅವರಿಗೆ ವಿಶೇಷ ಪ್ರೀತಿ ಇದೆ. ನನ್ನ ವಿರೋಧಿಸುವವರು ನನ್ನ ಮೇಲೆ ಪ್ರೀತಿ ಹೊಂದಿದ್ದಾರೆ. ರಾಜಕೀಯ ಜೊತೆಗೆ ಉದ್ಯಮದಲ್ಲೂ ಬೆಳೆದಿದ್ದೇನೆ ಎಂದು ಪ್ರೀತಿಸುತ್ತಾರೆ. ನನ್ನನ್ನು ಯಾರೂ ಟಾರ್ಗೆಟ್ ಮಾಡುತ್ತಿಲ್ಲ. ಎಲ್ಲರ ಜೊತೆಗೆ ಒಳ್ಳೆಯ ಸಂಬಂಧ ಇದೆ. ಸರ್ಕಾರದ ಭಾಗವಾಗಿ ಮೀಸಲಾತಿ ಕಲ್ಪಿಸಲು ಪ್ರಯತ್ನಿಸುತ್ತಿದ್ದೇನೆ. ಮಂತ್ರಿ ಆಗಿ ಹೋರಾಟ ಮಾಡುವುದು ಸೂಕ್ತವಲ್ಲ. ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದು ಸಚಿವ ನಿರಾಣಿ ತಿಳಿಸಿದರು.