ಬೆಳಗಾವಿ: ಇಂದು ರಾಜ್ಯದಾದ್ಯಂತ ಮೆಡಿಕಲ್ ಕಾಲೇಜುಗಳು ಆರಂಭಗೊಂಡಿವೆ. ಬೆಳಗಾವಿಯ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮೊದಲ ದಿನ ಉತ್ಸಾಹದಿಂದ ತರಗತಿಗೆ ಹಾಜರಾದರು.
ಮಹಾಮಾರಿ ಕೊರೊನಾ ಕಾರಣಕ್ಕೆ ಕಳೆದ ಹಲವು ತಿಂಗಳಿಂದ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆನ್ಲೈನ್ ಮೂಲಕವೇ ಪಾಠ ಹೇಳಲಾಗುತ್ತಿತ್ತು. ಇಂದು ತರಗತಿ ಆರಂಭಗೊಂಡ ಕಾರಣ ವಿದ್ಯಾರ್ಥಿಗಳು ಉತ್ಸಾಹದಿಂದ ಕಾಲೇಜಿಗೆ ಬಂದಿದ್ದಾರೆ. ಪ್ರಥಮ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಕಾಲೇಜಿಗೆ ಕರೆಯಲಾಗಿದೆ. ಈಗಾಗಲೇ ಆನ್ಲೈನ್ ತರಗತಿ ಹೇಳಲಾಗಿದ್ದು, ಇದೀಗ ಪ್ರಾಯೋಗಿಕ ತರಬೇತಿಗೆ ಆದ್ಯತೆ ನೀಡಲಾಗುತ್ತಿದೆ.
ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ಕಾಲೇಜು ಹಾಗೂ ತರಗತಿಗಳಿಗೆ ಸ್ಯಾನಿಟೈಸ್ ಮಾಡಲಾಗಿದೆ. ಪ್ರಾಯೋಗಿಕ ತರಗತಿ ವೇಳೆ ಮಾಸ್ಕ್ ಧರಿಸುವುದು ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಬಿಮ್ಸ್ನಲ್ಲಿ ಒಟ್ಟು 600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇದೀಗ 300 ವಿದ್ಯಾರ್ಥಿಗಳನ್ನು ಮಾತ್ರ ಕಾಲೇಜಿಗೆ ಕರೆಸಿಕೊಳ್ಳಲಾಗಿದೆ.
ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳು ಮುಂದಿನ ವಾರ ತರಗತಿಗೆ ಬರಲಿದ್ದಾರೆ. ಪ್ರತಿ ವಿದ್ಯಾರ್ಥಿಗಳ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ.