ಚಿಕ್ಕೋಡಿ : ಕಳೆದ ಎರಡು ದಿನಗಳ ಹಿಂದೆ ಹುಕ್ಕೇರಿ ಪಟ್ಟಣದ ವೃದ್ಧೆಯೋರ್ವಳು ಕೊರೊನಾದಿಂದ ಸಾವನ್ನಪ್ಪಿದ್ದಳು. ಆದರೆ ಈಗ ಪಟ್ಟಣದಿಂದ ಕೇವಲ 3 ಕಿಮೀ ದೂರದಲ್ಲಿ ಮದುವೆ ಸಮಾರಂಭ ನಡೆದಿದ್ದು, ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಸಮಾರಂಭದಲ್ಲಿ 400ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದ ಕಾಡಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿರುವ ಕಲ್ಯಾಣ ಮಂಟಪದಲ್ಲಿ, ಬಸ್ತವಾಡ ಗ್ರಾಮದ ಮುಖಂಡ ದಯಾನಂದ ವಂಟಮುರಿ ಮಗನ ಮದುವೆ ನಡೆದಿದೆ. ಈ ಸಮಾರಂಭಕ್ಕೆ ಮಹಾರಾಷ್ಟ್ರ ಗಡಿ ಗ್ರಾಮಗಳ ಜನ ಸೇರಿದಂತೆ 400ಕ್ಕೂ ಹೆಚ್ಚು ಜನ ಆಗಮಿಸಿದ್ದರು. ಮಾಸ್ಕ್ ಬಳಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮದುವೆಯಲ್ಲಿ ಭಾಗಿಯಾಗಿದ್ದಾರೆ.
ಮದುವೆ ಸಮಾರಂಭದಲ್ಲಿ ನೂರಾರು ಜನ ಸೇರಿದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.