ಚಿಕ್ಕೋಡಿ: ಕೊರೊನಾ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿ ಅಂತರ್ ರಾಜ್ಯ ಸಂಪರ್ಕ ಬಂದ್ ಮಾಡಿದೆ. ಆದರೆ ಜನರು ಕಳ್ಳ ದಾರಿ ಮೂಲಕ ನುಸುಳುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದು, ಇದರಿಂದ ಗ್ರಾಮೀಣ ಭಾಗದ ಜನರಲ್ಲಿ ಆತಂಕ ಹೆಚ್ಚಾಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟೂರು ಗ್ರಾಮದಿಂದ ಸ್ಪಲ್ಪ ಮುಂದೆ ಸಾಗಿದ್ರೆ ಸಿಗುವ ಗಡಿಯಲ್ಲಿ ಕರ್ನಾಟಕದ ಗೋಟೂರು ಹಾಗೂ ಮಹಾರಾಷ್ಟ್ರದ ನಾಗನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಈಗ ಕೊರೊನಾವನ್ನ ರಾಜ್ಯಕ್ಕೆ ಹೊತ್ತು ತರುವ ರಹದಾದಿಯಾಗಿದೆ.
ರಾಜ್ಯದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಪ್ರತಿ ಹಳ್ಳಿಯಲ್ಲಿ 20ಕ್ಕೂ ಹೆಚ್ಚು ಜನ ಈಗಾಗಲೇ ಸೋಂಕಿಗೆ ಬಲಿಯಾಗಿದ್ದಾರೆ. ಆದರೆ, ಗಡಿ ಬಂದ್ ಮಾಡಿದ್ದೇವೆ ಅಂತ ಹೇಳುತ್ತಿರುವ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಿದೆ. ಮಹಾರಾಷ್ಟ್ರದಿಂದ ನುಸುಳಿ ಬರುವ ಆಗಂತುಕರಿಂದ ಈಗ ಬೆಳಗಾವಿಯ ಗಡಿ ಭಾಗದ ಹಳ್ಳಿಗಳಲ್ಲಿ ಆತಂಕ ಶುರುವಾಗಿದೆ.
ಸೇತುವೆ ಮೂಲಕ ಗಡಿ ದಾಟುತ್ತಿರುವ ಬೈಕ್ ಸವಾರರು:
ರಾಜ್ಯದ ಗಡಿ ನಿಪ್ಪಾಣಿಯ ಕುಗನೊಳ್ಳಿ ಚೆಕ್ ಪೋಸ್ಟ್ ಬಳಿ ಸರ್ಕಾರ ಹಾಗೂ ಜಿಲ್ಲಾಡಳಿತ ಪೊಲೀಸರನ್ನ ನೇಮಿಸಿದೆ. ರಾಜ್ಯ ಪ್ರವೇಶ ಮಾಡುವ ಪ್ರತಿಯೊಂದು ವಾಹನದ ಮೇಲೂ ಸಹ ನಿಗಾ ಇಡಲಾಗಿದೆ. ಆದರೆ, ಕಳ್ಳದಾರಿಯ ಮೂಲಕ ಕರ್ನಾಟಕ ಪ್ರವೇಶ ಮಾಡುವ ವಾಹನಗಳಿಗೆ ತಡೆ ಒಡ್ಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಕಳ್ಳದಾರಿ ಬಂದ್ ಮಾಡಿ ಅಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.